ಬೆಂಗಳೂರು: ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು, ಖರ್ಗೆ ಬೆಂಬಲಿಸಿದ ಎಲ್ಲಾ ನಾಯಕರಿಗೂ ಧನ್ಯವಾದಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಖರ್ಗೆ ಆಯ್ಕೆಯಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಬಲ ಬಂದಿದೆ. ನಿಜಲಿಂಗಪ್ಪ ಬಳಿಕ ಕನ್ನಡಿಗ ಖರ್ಗೆ ಅವರಿಗೆ ಎಐಸಿಸಿ ಪಟ್ಟ ಸಿಕ್ಕಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರು 50 ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷ ನಿಷ್ಠೆ, ತ್ಯಾಗ, ಹೋರಾಟದ ಛಲ ಇದ್ದರೆ ಒಳ್ಳೆ ಅವಕಾಶ ಸಿಗುತ್ತೆ ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ ಎಂದು ಹೇಳಿದರು.
ಕಾಂಗ್ರೆಸ್ ಸ್ವಾತಂತ್ರ್ಯ ತಂದು ಕೊಟ್ಟು ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆ ಸಾಕ್ಷಿಯಾಗಿದೆ. ದೇಶಕ್ಕೆ ಪ್ರಜಾಪ್ರಭುತ್ವ ಕೊಟ್ಟಿದ್ದೇವೆ. ನಮ್ಮಲ್ಲೂ ಪ್ರಜಾಪ್ರಭುತ್ವ ಉಳಿಸಿದ್ದೇವೆ. 24 ವರ್ಷಗಳ ನಂತರ ಚುನಾವಣೆ ನಡೆದಿದೆ. ಸೋನಿಯಾ ಗಾಂಧಿಯವರಿಗೆ ಎಲ್ಲಾ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ ಎಂದು ಹೇಳಿದರು.