ಕೋವಿಡ್ ಪರಿಸ್ಥಿತಿ ಸಾಮಾನ್ಯ ರೂಪಕ್ಕೆ ಬರುವವರೆಗೂ 2021ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೂಡಲು ನಿರ್ದೇಶನ ಕೋರಿ ಹಲವಾರು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
2021ರ ನಾಗರಿಕ ಸೇವೆಗಳ ಪರೀಕ್ಷೆಯನ್ನು ಶುಕ್ರವಾರದಿಂದ ವೇಳಾಪಟ್ಟಿಯ ಪ್ರಕಾರವೇ ನಡೆಸಲಾಗುತ್ತದೆ ಎಂದು ಯುಪಿಎಸ್ಸಿ ಹೇಳಿದ ಒಂದು ದಿನಗಳ ಬಳಿಕ ಹೈಕೋರ್ಟ್ ಈ ಮಹತ್ವದ ಆದೇಶ ಪ್ರಕಟಿಸಿದೆ.
ಕೋವಿಡ್ 19 ಹರಡುವಿಕೆ ತಡೆಯಲು ಸರ್ಕಾರಗಳು ವಿಧಿಸುತ್ತಿರುವ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಅಭ್ಯರ್ಥಿಗಳಿಗೆ ಹಾಗೂ ಪರೀಕ್ಷಾ ಸಿಬ್ಬಂದಿಗೆ ಪರೀಕ್ಷೆಗೆ ಹಾಜರಾಗಲು ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ರಾಜ್ಯಗಳಿಗೆ ಆಯೋಗವು ಸೂಚನೆ ನೀಡಿದೆ. ಅದರಲ್ಲೂ ಕಂಟೈನ್ಮೆಂಟ್ ಹಾಗೂ ಮೈಕ್ರೋ ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.
ಅಗತ್ಯವಿದ್ದಲ್ಲಿ ಅಭ್ಯರ್ಥಿಗಳ ಪರೀಕ್ಷಾ ಪ್ರವೇಶಾತಿ ಚೀಟಿ ಹಾಗೂ ಪರೀಕ್ಷಾ ನಿರ್ವಾಹಕರ ಗುರುತಿನ ಚೀಟಿಗಳನ್ನೇ ಚಲನೆಯ ಪಾಸ್ ಆಗಿ ಬಳಕೆ ಮಾಡಬಹುದು ಎಂದು ಯುಪಿಎಸ್ಸಿ ಹೇಳಿದೆ.
ಕೋವಿಡ್ 19 ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಾಮರ್ಶಿಸಿದ ಬಳಿಕ ಆಯೋಗವು ನಾಗರಿಕ ಸೇವೆಗಳ ಪರೀಕ್ಷೆಯನ್ನು ವೇಳಾಪಟ್ಟಿಯ ಪ್ರಕಾರ ಅಂದರೆ ಜನವರಿ 7,8,15 ಹಾಗೂ 16ನೇ ಜನವರಿಯಂದು ನಡೆಸಲು ನಿರ್ಧರಿಸಿದೆ ಎಂದು ಹೇಳಿದೆ.