ಬೆಂಗಳೂರು: ಕಾಂಗ್ರೆಸ್ ಮಹಿಳಾ ಸಮಾವೇಶ ಹಾಗೂ ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದು, ಯುಪಿ ಪ್ರವಾಸ ಮಾಡಿ ಒಂದಂಕಿ ಫಲಿತಾಂಶ ತಂದುಕೊಟ್ಟರು ಇನ್ನು ಪ್ರಿಯಾಂಕಾ ಇಲ್ಲಿಗೆ ಬಂದು ಏನು ಮಾಡಲು ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ನಾ ನಾಯಕಿ ಸಮಾವೇಶ ಮಾಡಲು ಹೊರಟಿದೆ. ನಾ ನಾಯಕಿ ಅಲ್ಲ, ನಾನು ನಾಲಾಯಕ್ ಅಂತಾ ಮಾಡುತ್ತಿದ್ದಾರೆ. ನಮ್ಮ ಸ್ನೇಹಿತರು ಕೂಡ ಅವರ ಜೊತೆ ಸೇರಿಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.
ಇನ್ನು ಕಾಂಗ್ರೆಸ್ ಬಸ್ ಯಾತ್ರೆ ಬಗ್ಗೆಯೂ ಲೇವಡಿ ಮಾಡಿದ ಸಚಿವರು, ಕೆಲವರು ಬಸ್ ಯಾತ್ರೆ ಮಾಡಿ ಕೆಲವರ ಮನೆ ತಲುಪಬಹುದು. ಆದರೆ ನಾವು ಪ್ರತಿಯೊಬ್ಬರ ಮನೆಗೆ ಸರ್ಕಾರದ ಯೋಜನೆ ತಲುವ ಹಾಗೆ ಮಾಡಿದ್ದೇವೆ. ಜನರ ಬಳಿ ಹೋಗಿ ಮತ ಕೇಳುವ ಕೆಲಸ ಮಾಡುತ್ತೇವೆ. ಈ ಹಿಂದೆ ಇದ್ದ ಕಾಂಗ್ರೆಸ್ ಸಿಎಂ ಗಳನ್ನು ನೆರೆ, ಬರ ಬಂದಾಗ ಮುಖ್ಯಮಂತ್ರಿಗಳನ್ನೆ ಹುಡುಕುವ ಸ್ಥಿತಿಯಿತ್ತು. ಆದರೆ ನಾವು ಅತಿವೃಷ್ಟಿ, ಅನಾವೃಷ್ಟಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ, ಜನರ ಸಂಕಷ್ಟಗಳಿಗೆ ಪರಿಹಾರ ನೀಡಿದ್ದೇವೆ ಎಂದರು.