ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಈ ಬಾರಿಯ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ನಿಯಮವನ್ನು ರೂಪಿಸಲಾಗಿದ್ದು, ಹಿಜಾಬ್, ಜರ್ಕಿನ್, ಸ್ವೆಟರ್ ಸೇರಿದಂತೆ ತುಂಬುತೋಳಿನ ವಸ್ತ್ರಗಳನ್ನು ಧರಿಸಿ ಪರೀಕ್ಷಾ ಕೊಠಡಿಗೆ ಬರುವಂತಿಲ್ಲ. ಅಲ್ಲದೆ ಯಾವುದೇ ಆಭರಣಗಳನ್ನು ಕೂಡ ಧರಿಸುವಂತಿಲ್ಲ.
ಮೊಬೈಲ್ ಫೋನ್, ಬ್ಲೂಟೂತ್, ವೈರ್ ಲೆಸ್ ಸೆಟ್, ಕೈಗಡಿಯಾರ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದ್ದು, ನೀಟ್ ಮಾದರಿಯಲ್ಲಿಯೇ ಬಲು ಕಟ್ಟುನಿಟ್ಟಾಗಿ ಈ ಬಾರಿಯ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಜೂನ್ 16ರ ಮೊದಲ ದಿನ ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರಿಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದ್ದು, ಜೂನ್ 16ರ ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ.
ಜೂನ್ 18ರ ಮೂರನೇ ದಿನದಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಳಿಗ್ಗೆ 11.30 ರಿಂದ 12.30 ರ ವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.