ಬೆಂಗಳೂರು: ನಾಳೆಯಿಂದ ಮಾರ್ಚ್ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಾಲನೆ ಕಡ್ಡಾಯವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಸಿ.ನಾಗೇಶ್, ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಾಲನೆ ಕಡ್ಡಾಯವಾಗಿದೆ. ಕಳೆದ ವರ್ಷದ ನಿಯಮವೇ ಈ ವರ್ಷವೂ ಜಾರಿಯಲ್ಲಿರುತ್ತದೆ. ಕಳೆದ ವರ್ಷ 6 ವಿದ್ಯಾರ್ಥಿನಿಯರು ಈ ನಿಯಮದಿಂದ ಪರೀಕ್ಷೆ ಬರೆದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಿ ಎಂದು ಸೂಚಿಸಿದರು.
1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ಎಲ್ಲಾ ವಿಷಯಗಳಲ್ಲೂ 20 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಇರುತ್ತದೆ. ಎಲ್ಲಾ ಮಕ್ಕಳಿಗೂ ಅನುಕೂಲವಾಗಲಿ ಎಂದು MCQ ವ್ಯವಸ್ಥೆ ಮಾಡಿದ್ದೇವೆ. ಬೆಳಿಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಟ್ಟು 7,26,195 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ ಎಂದು ವಿವರಿಸಿದರು.