ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ ಏರ್ ಶೋ ಆರಂಭವಾಗಲಿದ್ದು, ಯಲಹಂಕ ಹಾಗೂ ಬಳ್ಳಾರಿ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಾಲಾಗಿದೆ.
ನಾಳೆ ಏರ್ ಶೋ ಉದ್ಘಾಟನೆಗೊಳ್ಳಲಿದ್ದು, ಯಲಹಂಕದ ಸುತ್ತಮುತ್ತ ಟ್ರಾಫಿಕ್ ಜಾಮ್ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗೃತಾಕ್ರಮವಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ 8 ರಿಂದ 11:30ರವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್ ನಿಂದ ಎಲಿವೇಟೆಡ್ ರಸ್ತೆಯಲ್ಲಿ ವಾಹನಗಳ ಚಾಲನೆಗೆ ನಿಷೇಧ ಹೇರಲಾಗಿದೆ. ಏರ್ ಶೋ ಕಾರ್ಯಕ್ರಮದ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದವರು ಎಲಿವೇಟೆಡ್ ರಸ್ತೆ ಬದಲಾಗಿ ಕೆಳಗಿನ ಸರ್ವಿಸ್ ರಸ್ತೆ ಬಳಸಬೇಕು. ವಿಮಾನ ನಿಲ್ದಾಣಕ್ಕೆ ಹೋಗುವವರು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸಬೇಕು. ಐದು ದಿನಗಳ ಕಾಲ ಏರ್ ಪೋರ್ಟ್ ಗೆ ಹೋಗುವ ರಸ್ತೆಯಲ್ಲಿ ದೊಡ್ದ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ಬೆಂಗಳೂರು ಪೂರ್ವಭಾಗದಿಂದ ಏರ್ ಪೋರ್ಟ್ ಗೆ ಹೋಗುವವರು ಕೆ ಆರ್ ಪುರಂ, ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ಏರ್ ಪೋರ್ಟ್ ಗೆ ತಲುಪಬಹುದು. ಪಶ್ಚಿಮದಿಂದ ಏರ್ ಪೋರ್ಟ್ ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ತೆರಳಬಹುದಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ ತಿಳಿಸಿದೆ.