ಮೈಸೂರು: ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿಗೆ ತೀವ್ರ ಅಸಮಾಧಾನ ವ್ಯಕ್ತಪದಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಮೀಸಲಾತಿ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಈಶ್ವರಪ್ಪ, ಖರ್ಗೆ ಅವರು ಎಷ್ಟು ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಖರ್ಗೆಯವರು ಮಂತ್ರಿಯಾಗಿ ಆರ್ಥಿಕವಾಗಿ ಸಬಲತೆಯನ್ನು ಹೊಂದಿದ್ದಾರೆ. ಆರ್ಥಿಕವಾಗಿ ಮೇಲೆ ಬಂದ ಮೇಲೂ ಯಾಕೆ ಮೀಸಲಾತಿ ಕೊಡಬೇಕು? ಮೊದಲು ಆರ್ಥಿಕ ಸಬಲರಿಗೆ ಮೀಸಲಾತಿ ನಿಲ್ಲಿಸಲಿ ಎಂದು ಹೇಳಿದರು.
ಎಲ್ಲಾ ದಲಿತ ನಾಯಕರಿಂದ ಮೀಸಲಾತಿ ದುರುಪಯೋಗವಾಗುತ್ತಿದೆ. ನಾನು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದೇನೆ. ನಾನು ಯಾವ ಮೀಸಲಾತಿಯನ್ನು ಬಳಸಿಕೊಳ್ಳುತ್ತಿಲ್ಲ ಎಂದರು.
ಇನ್ನು ಮತಾಂತರ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಬಿಲ್ ಹರಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸೋನಿಯಾ ಗಾಂಧಿ ಸಂತೃಪ್ತಿ ಪಡಿಸಲು ಹೀಗೆ ಮಾಡಿದ್ದಾರೆ. ವಿಧೇಯಕ ಅಂಗೀಕಾರವಾಗಿರುವುದು ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಿದರು.