ಮೈಸೂರು: ನಿನ್ನೆಯಷ್ಟೇ ತಾವು ಕೂಡ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದೀಗ ಬಹಿರಂಗವಾಗಿ ಸಿಎಂ ಹುದ್ದೆ ಆಕಾಂಕ್ಷೆ ಬಗ್ಗೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗುವುದು ಸಂಪ್ರದಾಯ. ಅದು ನಮ್ಮ ಪಕ್ಷ ಎಂದಲ್ಲ, ಎಲ್ಲ ಪಕ್ಷದಲ್ಲಿಯೂ ಅದು ಸಹಜ. ನಾನೇನು ಸನ್ಯಾಸಿನಾ ? ಖಾವಿ ಬಟ್ಟೆ ಹಾಕಿದ್ದೇನಾ ? ನಾನು ಹಾಕಿರುವುದು ಖಾದಿ ಎಂದು ಹೇಳುವ ಮೂಲಕ ತಾವು ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ, ಕಾಂಗ್ರೆಸ್ ಬಣ ಯಾವಾಗಲೂ ಒಂದೆ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು. ಆನಂತರ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸಿಎಂ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಈಗ ಯಡಿಯೂರಪ್ಪನವರಿಗೆ ಮತ್ತೆ ಸಿಎಂ ಆಗಬೇಕು ಎಂಬ ಆಸೆ ಇಲ್ವಾ ? ಬೊಮ್ಮಾಯಿಯವರಿಗೆ ಸಿಎಂ ಆಗಿ ಮುಂದುವರೆಯುವ ಆಸೆಯಿಲ್ವಾ ? ಹಾಗೇ ವಿಪಕ್ಷ ನಾಯಕರಿಗೆ, ಅಧ್ಯಕ್ಷರಾದವರಿಗೂ ಆಸೆಯಿರುತ್ತೆ. ಪಕ್ಷದ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗುವುದು ಸಂಪ್ರದಾಯ. ಹಿಂದೆ ಎಸ್.ಎಂ. ಕೃಷ್ಣ ಕಾಂಗ್ರೆಸ್ ನಲ್ಲಿದ್ದಾಗ ಸಿಎಂ ಆಗಿದ್ದರು. ಸಮುದಾಯ ಬೆಂಬಲಿಸಿತ್ತು. ಹಾಗೇ ನಮ್ಮ ಸಮುದಾಯ ನನಗೆ ಬೆಂಬಲವನ್ನು ನೀಡಲಿ. ನನಗೆ ಪಕ್ಷ, ಧ್ವಜ ಮುಖ್ಯ. ಹೊರತು ವರ, ಶಾಪ ಯಾರಿಗೂ ಸಿಗಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ಬಗ್ಗೆ ಯಾವ ಗೊಂದಲಗಳು ಇಲ್ಲ. ರಾಜ್ಯದ ಹಿತ ಕಾಯಲು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದರು.
ನಾವು ಹಲವು ವಿಚಾರಗಳನ್ನು ಮುಂದಿಟ್ಟುಕೊಂದು ಹೋರಾಡಿದ್ದೇವೆ. ವಿಪಕ್ಷ ವೀಕ್ ಇದ್ದರೆ ಸಚಿವರು ರಾಜೀನಾಮೆ ಕೊಡುತ್ತಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವಧಿಯಲ್ಲಿ ಜನರಿಗೆ ಕೊಟ್ಟ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು ಕೊಟ್ಟ ಭರವಸೆಯಲ್ಲಿ ಶೇ.40ರಷ್ಟು ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.