ಬೆಂಗಳೂರು: ರಂಭಾಪುರಿ ಶ್ರೀಗಳನ್ನು ಭೇಟಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರವಾಗಿ ಅವರು ಸ್ವಾಮೀಜಿ ಬಳಿ ನೊಂದಿದ್ದಾರೆ ಎಂಬ ಚರ್ಚೆ ರಾಜ್ಯದಲ್ಲಿ ಆರಂಭವಾಗಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಾನು ಯಾವುದೇ ಪಶ್ಚಾತ್ತಾಪದ ಮಾತುಗಳನ್ನು ಆಡಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ರಂಭಾಪುರಿ ಶ್ರೀ ಭೇಟಿಯಾದಾಗ ಯಾವ ಪಶ್ಚಾತ್ತಾಪದ ಹೇಳಿಕೆ ಕೊಟ್ಟಿಲ್ಲ. ಧರ್ಮ ಒಡೆಯುವ ಉದ್ದೇಶ ನಮಗೆ ಇಲ್ಲ. ಆದರೆ ಆ ಸಂದರ್ಭದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆದವು. ನಾವು ಏನು ಮಾಡಿದೆವು ಎಂಬುದನ್ನು ಸ್ವಾಮೀಜಿಗಳಿಗೆ ವಿವರಿಸಿದ್ದೇನೆ.
ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇವೆ ಎಂಬುದನ್ನು ಹೇಳಿದ್ದೇನೆ. ಇದು ಅಪಪ್ರಚಾರವಾಗಿದೆ. ಶಾಮನೂರು ಶಿವಶಂಕರಪ್ಪ ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು. ಆಗಿನಿಂದ ಇದು ಶುರುವಾಗಿದೆ ಅಷ್ಟೇ. ಧರ್ಮದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಧರ್ಮ ಒಡೆಯುವ ಉದ್ದೇಶವೂ ನನಗಿಲ್ಲ ಎಂದು ಹೇಳಿದರು.