ನವದೆಹಲಿ: ಬಾಲ್ಯದಿಂದ ಈವರೆಗೂ ನಾನು ಹೋರಾಟಗಳನ್ನೇ ಮಾಡಿಕೊಂಡು ಬರುತ್ತಿದ್ದೇನೆ. ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನ, ಸಚಿವ ಸ್ಥಾನ ಸೇರಿದಂತೆ ಹಲವು ಹುದ್ದೆ ಅಲಂಕರಿಸಿದ್ದೇನೆ. ನಾನು ಯಾರ ವಿರುದ್ಧವೂ ಸ್ಪರ್ಧಿಸುತ್ತಿಲ್ಲ, ಪಕ್ಷ ಬಲಪಡಿಸುವ ಉದ್ದೇಶದಿಂದ ಚುನಾವಣೆಗೆ ನಿಂತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಖರ್ಗೆ, ನಾನು ಯಾವಾಗಲೂ ಹೃದಯದಿಂದ ಫುಲ್ ಟೈಮ್ ಕೆಲಸ ಮಾಡಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾರೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದರು. ಹಾಗಾಗಿ ಹಲವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ವಿಚಾರ ಸಿದ್ಧಾಂತ, ಪಕ್ಷದ ವಿಚಾರ ಸಿದ್ಧಾಂತಗಳನ್ನು ಮುಂದಿಟ್ಟು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಪಕ್ಷದ ಎಲ್ಲರೂ ಸಹಕಾರ ನೀಡಬೇಕು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕೇವಲವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಅಧ್ಯಕ್ಷ ಸ್ಥಾನಕ್ಕೆ ಯಾವಾಗ ಚುನಾವಣೆ ಮಾಡಿದ್ದಾರೆ? ಹತ್ತು ವರ್ಷ ಅಧಿಕಾರದಲ್ಲಿದ್ದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕಾಗಿ ಹಪಹಪಿಸಿದ್ದಾರಾ? ಜಿ-23 ಎಂಬುದು ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.