ಕಾರವಾರ: ಲಿಂಗಾಯಿತ ಸಮಾಜಕ್ಕೆ ಜೆಡಿಎಸ್ ಏನು ಮಾಡಿದೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಅಂದು ನಾನು ಯಡಿಯೂರಪ್ಪ ಜತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮವಾಗುತ್ತಿದ್ದರು ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಬೆಳವಣಿಗೆಯಲ್ಲಿ ನನ್ನ ಸಹಕಾರವಿದೆ. ನಾನು ಯಡಿಯೂರಪ್ಪ ಜತೆ ಕೈ ಜೋಡಿಸದಿದ್ದರೆ ಯಡಿಯೂರಪ್ಪನವರ ರಾಜಕೀಯ ಅಂದೇ ಮುಗಿಯುತ್ತಿತ್ತು. ಯಡಿಯೂರಪ್ಪನವರು ಒಂದು ಸ್ಲಿಪ್ ಕಳುಹಿಸಿದ್ದರು. ಸಿದ್ದಲಿಂಗಸ್ವಾಮಿ ಎಂಬುವವರು ನನ್ನ ಕೈಗೆ ಒಂದು ಚೀಟಿ ತಂದುಕೊಟ್ಟಿದ್ದರು. ಯಡಿಯೂರಪ್ಪರನ್ನು ಮಂತ್ರಿ ಮಾಡಿ ಎಂದು ಮನವಿ ಮಾಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆ. ಪಾಪ ವಿಜಯೇಂದ್ರ ಅವರಿಗೆ ಏನು ಗೊತ್ತಿದೆ. ಇವರು ನಿನ್ನೆ ಮೊನ್ನೆ ಬಂದವರು ಅಂದು ನಾನು ಯಡಿಯೂರಪ್ಪ ಜತೆ ಕೈಜೋಡಿಸದಿದ್ದರೆ ಯಡಿಯೂರಪ್ಪನವರ ರಾಜಕೀಯ ಅಂತ್ಯವಾಗುತ್ತಿತ್ತು. ವಿಜಯೇಂದ್ರ ಎಲ್ಲಿ ಬರುತ್ತಿದ್ದರು ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಲು ಹೊರಟಿದ್ದರು. ಅದನ್ನು ತಡೆದು ಯಡಿಯೂರಪ್ಪ ಜತೆ ಸರ್ಕಾರ ರಚನೆ ಮಾಡಲು ನಿರ್ಧರಿಸಿದೆ. ಅನುಕಂಪ ಎಂಬ ಕಾರಣಕ್ಕಾಗಿ ಅಲ್ಲ, ಅಧಿಕಾರ ಇದ್ದ ವೇಳೆ ಬಿಜೆಪಿ ನಾಯಕರನ್ನು ನಾನು ಯಾವತ್ತಾದರೂ ಅಗೌರವದಿಂದ ಕಂಡಿದ್ದೇನಾ? ನಾನು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ, ಯಾರನ್ನೂ ಅಗೌರವಯುತವಾಗಿ ನಡೆದುಕೊಂಡಿಲ್ಲ, ವಿಜಯೇಂದ್ರಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.