ನವೆಂಬರ್ ಮಧ್ಯಭಾಗದಲ್ಲಿ ಅಂದರೆ ನವೆಂಬರ್ 15ಕ್ಕೆ ಪ್ರಪಂಚದ ಜನಸಂಖ್ಯೆ ಎಂಟು ಬಿಲಿಯನ್ ತಲುಪಲಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಈ ಅಂದಾಜ ಪಟ್ಟಿಯನ್ನು ತಯಾರಿಸಿದ್ದು, 1950ರಲ್ಲಿ 2.5 ಬಿಲಿಯನ್ ಇದ್ದ ಜನಸಂಖ್ಯೆ ಈಗ ಮೂರು ಪಟ್ಟಿಗಿಂತ ಅಧಿಕವಾಗಿದೆ ಎಂದು ತಿಳಿಸಿದೆ.
1962-65ರ ನಡುವಿನ ಅವಧಿಯಲ್ಲಿ ವಿಶ್ವದ ಜನಸಂಖ್ಯೆ ಶೇ.2.1 ರಷ್ಟು ಕುಸಿತ ಕಂಡಿದ್ದು, 2020ರಲ್ಲಿ ಶೇಕಡ 1ರಷ್ಟು ಇಳಿಕೆಯಾಗಿತ್ತು. 2050ರ ವೇಳೆಗೆ ಶೇಕಡ 0.5 ರಷ್ಟು ಕುಸಿತವಾಗಲಿದೆ ಎಂದು ಹೇಳಲಾಗಿದೆ. 2030ಕ್ಕೆ ವಿಶ್ವದ ಜನಸಂಖ್ಯೆ 8.5 ಬಿಲಿಯನ್ ಇರಲಿದ್ದರೆ, 2050ರಲ್ಲಿ 9.7 ಬಿಲಿಯನ್ ಹಾಗೂ 2080 ರಲ್ಲಿ 10.4 ಬಿಲಿಯನ್ ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ಇನ್ನು ನೆರೆ ರಾಷ್ಟ್ರ ಚೀನಾದ ಜನಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಚೀನಾಕ್ಕಿಂತ ಕೊಂಚ ಹಿಂದೆ ಇರುವ ಭಾರತದ ಜನಸಂಖ್ಯೆ 2023 ರ ವೇಳೆಗೆ ಆ ದೇಶವನ್ನು ಹಿಂದಿಕ್ಕಲಿದೆ ಎಂದು ಹೇಳಲಾಗಿದೆ. ಚೀನಾದ ಪ್ರಸ್ತುತ ಜನಸಂಖ್ಯೆ 1.4 ಬಿಲಿಯನ್ ಇದ್ದು, 2050 ರ ವೇಳೆಗೆ ಇಳಿಕೆ ಕಾಣುವ ಮೂಲಕ 1.3 ಬಿಲಿಯನ್ ಆಗಲಿದೆ. ಭಾರತದ ಜನಸಂಖ್ಯೆ 2050ಕ್ಕೆ 1.7 ಬಿಲಿಯನ್ ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ ಹೇಳಿದೆ.