ದೇಶದಲ್ಲಿ ಜನಿಸುವ ಪ್ರತಿಯೊಂದು ಶಿಶುವಿಗೂ ಜನನವಾದ ಕೂಡಲೇ ಆಧಾರ್ ನೋಂದಣಿ ಮಾಡಿಸುವ ಕ್ರಮಗಳನ್ನು ಪರಿಚಯಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಚಿಂತನೆ ನಡೆಸಿದೆ.
“ನವಜಾತ ಶಿಶುಗಳಿಗೆ ಆಧಾರ್ ಸಂಖ್ಯೆ ನೀಡಲು ಜನನಗಳ ನೋಂದಣಿ ಕಾರ್ಯಾಲಯಗಳೊಂದಿಗೆ ಯುಐಡಿಎಐ ಒಪ್ಪಂದಕ್ಕೆ ಬರಲು ನೋಡುತ್ತಿದೆ,” ಎಂದು ಯುಐಡಿಎಐನ ಸಿಇಓ ಸೌರಭ್ ಗಾರ್ಗ್ ತಿಳಿಸಿದ್ದಾರೆ.
“ದೇಶದ ವಯಸ್ಕ ಜನಾಂಗದ 99.7%ನಷ್ಟು ಮಂದಿ ಆಧಾರ್‌ಗೆ ನೋಂದಾಯಿತರಾಗಿದ್ದಾರೆ. ನಾವು ಇದುವರೆಗೂ 131 ಕೋಟಿ ಮಂದಿಯನ್ನು ನೋಂದಣಿ ಮಾಡಿದ್ದೇವೆ. ನಮ್ಮ ಮುಂದಿನ ಗುರಿ ಹೊಸದಾಗಿ ಜನಿಸಿದ ಮಕ್ಕಳನ್ನು ನೋಂದಣಿ ಮಾಡುವುದಾಗಿದೆ. ಪ್ರತಿ ವರ್ಷ 2.-2.5 ದಶಲಕ್ಷ ಮಕ್ಕಳು ಜನಿಸುತ್ತಿವೆ. ನಾವು ಸದ್ಯ ಅವರನ್ನು ಆಧಾರ್‌ಗೆ ನೋಂದಣಿ ಮಾಡುತ್ತಿದ್ದೇವೆ,” ಎಂದು ಗಾರ್ಗ್ ತಿಳಿಸಿದ್ದಾರೆ.
ಮಗು ಜನಿಸಿದ ಕೂಡಲೇ ಅವರ ಛಾಯಾಚಿತ್ರ ಪಡೆದುಕೊಂಡು ಆಧಾರ್ ಕಾರ್ಡ್ ನೀಡಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಿಗೆ ಅವರ ಬಯೋಮೆಟ್ರಿಕ್ಸ್ ದಾಖಲಿಸಿಕೊಂಡು, ಅವರ ಹೆತ್ತವರಲ್ಲಿ ಒಬ್ಬರೊಂದಿಗೆ ಲಿಂಕ್ ಮಾಡಲಾಗುತ್ತದೆ. ಮಕ್ಕಳಿಗೆ ಐದು ವರ್ಷ ತುಂಬುತ್ತಲೇ ಅವರ ಬಯೋಮೆಟ್ರಿಕ್ಸ್‌ಅನ್ನು ಸೆರೆ ಹಿಡಿಯಲಾಗುವುದು ಎಂದು ಯುಐಡಿಎಐ ಸಿಇಓ ತಿಳಿಸಿದ್ದಾರೆ.