ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಪ್ರಬುದ್ಧ ರಾಜಕಾರಣಿ, ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾಲಾಯಕ್, ಅಪ್ರಬುದ್ಧ ರಾಜಕಾರಣಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಾಗಿರುವುದೇ ದುರಂತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಹೇಳಿದರು.
ಇದೇ ವೇಳೆ ಜೂನ್ 10ರಂದು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕೆಲಸ ನೋಡಿ ಮತ ಹಾಕುತ್ತಾರೆ ಎಂಬ ಮಾಜಿ ಸಿಎಂ ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬಿಜೆಪಿಯವರಿಗೆ ಯಾಕೆ ವೋಟ್ ಹಾಕಬೇಕು? ಏನು ಮಾಡಿದ್ದಾರೆ ಎಂದು ವೋಟ್ ಹಾಕಬೇಕು? ದೇಶದ ಆರ್ಥಿಕತೆಯನ್ನು ಸುಧಾರಣೆ ಮಾಡಿದ್ದಾರಾ? ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಾಗಿದೆ ಇದು ಒಳ್ಳೆಯ ಕೆಲಸವೇ? ನೋಟ್ ಬ್ಯಾನ್, ಜಿಎಸ್ ಟಿಯಿಂದ ದೇಶದ ಆರ್ಥಿಕತೆಯೇ ನಾಶವಾಗಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕುವಂತೆ ಮಾಡಿರುವುದು ಒಳ್ಳೆಯದೇ? ಅದಕ್ಕಾಗಿ ಪ್ರಧಾನಿ ಮೋದಿಯವರಿಗೆ ವೋಟ್ ಹಾಕುತ್ತೀರಾ? ಯಾವ ಕಾರಣಕ್ಕೆ ಬಿಜೆಪಿಗೆ ವೋಟ್ ಹಾಕಬೇಕು? ಎಂದು ಪ್ರಶ್ನಿಸಿದರು.