ಶಿವಮೊಗ್ಗ: ರಾಜ್ಯಾದ್ಯಂತ ಪಿ ಎಫ್ ಐ ಸಂಘಟನೆಗಳ ಮೇಲೆ ಪೊಲೀಸರು ದಾಳಿ ನಡೆಸಿರುವುದು ಸ್ವಾಗತಾರ್ಹ. ರಾಷ್ಟ್ರದ್ರೋಹಿಗಳಿಗೆ ಬಿಜೆಪಿ ಸರ್ಕಾರ ಯಾವತ್ತೂ ಬೆಂಬಲ ಕೊಡಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ ಮಟ್ಟಹಾಕಿಲ್ಲ. ಪಿ ಎಫ್ ಐ ಮೇಲಿನ ಕೇಸ್ ಗಳನ್ನು ಅಂದು ಹಿಂಪಡೆದರು. ರಾಷ್ಟ್ರದ್ರೋಹಿಗಳಿಗೆ ನಮ್ಮ ಸರ್ಕಾರ ಬೆಂಬಲಿಸಲ್ಲ. ಈ ಸಂಘಟನೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಆರ್ ಎಸ್ ಎಸ್ ಬಗ್ಗೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ನಲಪಾಡ್ ಅಯೋಗ್ಯ ಆತ ಜೈಲಿಗೆ ಹೋಗಿ ಬಂದವನು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆತನ ಹಣೆಬರಹ ಇಷ್ಟೇ. ಮೊದಲು ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳನ್ನು ಖಂಡಿಸಲಿ. ಆನಂತರ ಬಜರಂಗದಳ, ಆರ್ ಎಸ್ ಎಸ್ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.