ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಡಾ.ಕೆ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ. ಜೆ.ಡಿ.ಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಮ್ಮ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಾಡಿದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಳಿ ನಮ್ಮ ಸಮಸ್ಯೆ ಹೇಳಿಕೊಂಡಿದ್ದೆವು. ನಮಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ತಿಳಿಸಿದ್ದೆವು. ಆದರೆ ಸಿದ್ದರಾಮಯ್ಯ ಆಗ ಈ ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತಿಲ್ಲ. ನನ್ನ ಕ್ಷೇತ್ರ, ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.
2019ರ ಲೋಕಸಭಾ ಚುನಾವಣೆಯವರೆಗೂ ಸಹಿಸಿಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಇರಲ್ಲ. ಹೆಚ್.ಡಿ.ಕೆ ನೇತೃತ್ವದ ಮೈತ್ರಿ ಸರ್ಕಾರ ಇರಲು ಬಿಡಲ್ಲ ಎಂದು ಸಿದ್ದರಾಮಯ್ಯ ಶಾಸಕರಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದರು. ಕಾರ್ಯಕರ್ತರನ್ನು, ಮುಖಂಡರನ್ನು ಉಳಿಸಿಕೊಳ್ಳಲು ನಾವು ರಿಸ್ಕ್ ತೆಗೆದುಕೊಂಡೆವು. ರಾಜೀನಾಮೆ ನೀಡಿ ಮತ್ತೆ ಜನರಿಂದ ಆರಿಸಿ ಬರಲು ಮಂತ್ರಿಗಳಾದೆವು. ನಮ್ಮ ಈ ನಡೆಯಲ್ಲಿ ಸಿದ್ದರಾಮಯ್ಯ ಪ್ರೇರಣೆ ಇದೆ. ಇದರಲ್ಲಿ ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.