ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ್ದಾರೆ. ಈ ಬಾರಿ ದಸರಾ ಮಹೋತ್ಸವ ಹಲವು ವಿಶೇಷತೆಗಳಿಂದ ಕೂಡಿದೆ. ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಆಗಮಿಸಿದ್ದು ಸಂತಸ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಾಡಿನ ಜನತೆಗೆ ದಸರಾ ಮಹೋತ್ಸವದ ಶುಭಾಶಯಗಳನ್ನು ಕೋರಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾಡನ್ನು ಸಮೃದ್ಧಗೊಳಿಸುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇವೆ. ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ ಮಾಡಿ, ಶಕ್ತಿ ಕೊಡುತ್ತಾಳೆ. ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠ ನಾಡಿಗೆ ಶಕ್ತಿ ಕೊಡುವ ಸಂಚಲನವುಂಟು ಮಾಡಿದೆ ಎಂದರು.
ದುಷ್ಟ ಸಂಹಾರ ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇಂದು ಮಹಿಷಾಸುರ ಇಲ್ಲ. ಆದರೆ ನಮ್ಮೊಳಗಿನ ಮಹಿಷಾಸುರ ಗುಣ, ದುರ್ಗುಣಗಳನ್ನು ದೂರ ಮಾಡಬೇಕಿದೆ. ಉತ್ತಮವಾದ ಆಚಾರ, ವಿಚಾರ, ನಡೆ ನುಡಿ ಪಾಲಿಸಬೇಕು. ಒಳ್ಳೆಯ ವಿಚಾರಗಳನ್ನು ನಮ್ಮೊಳಗಿಟ್ಟು ಬದುಕಿನಲ್ಲಿ ಮುನ್ನಡೆಯುವಂತೆ ಸಂಕಲ್ಪ ಮಾಡೋಣ. ಆ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಕರೆ ನೀಡಿದರು.