ಉಡುಪಿ: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ನೀಡಿದರೂ ಕೂಡ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯುವುದಿಲ್ಲ. ಕೋರ್ಟ್ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದು ಹಿಜಾಬ್ ಗಾಗಿ ಅರ್ಜಿ ಸಲ್ಲಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅರ್ಜಿದಾರ ಐವರು ಮುಸ್ಲಿಂ ವಿದ್ಯಾರ್ಥಿನಿಯರು, ನಮಗೆ ಹೈಕೋರ್ಟ್ ಮೇಲೆ ಬಹಳ ನಿರೀಕ್ಷೆ ಇತ್ತು. ಆದರೆ ಇಂದು ಕೋರ್ಟ್ ನಮ್ಮ ವಿರುದ್ಧ ತೀರ್ಪು ಪ್ರಕಟಿಸಿದೆ. ಒತ್ತಡಕ್ಕೆ ಮಣಿದು ನ್ಯಾಯಾಲಯ ತೀರ್ಪು ನೀಡಿದಂತಿದೆ. ನಮಗೆ ನಮ್ಮ ಹಕ್ಕು ಸಿಕ್ಕಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರೆಸುತ್ತೇವೆ. ಹಿಜಾಬ್ ಗಾಗಿ ನಾವು ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.
ಕುರಾನ್ ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖವಿದೆ. ಕುರಾನ್ ನಲ್ಲಿ ಹೇಳಿರುವುದೇ ನಮಗೆ ಅಂತಿಮ. ಕುರಾನ್ ನಲ್ಲಿ ಉಲ್ಲೇಖವಿಲ್ಲ ಎಂದು ಹೇಳಿರುವುದು ತಪ್ಪು. ನಮಗೆ ಹಿಜಾಬ್ ಬೇಕು ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ನಾವು ಹಿಜಾಬ್ ತೆಗೆಯುವುದಿಲ್ಲ ಎಂದಿದ್ದಾರೆ.
ಹಿಜಾಬ್ ತೆಗೆದು ಕಾಲೇಜಿಗೆ ಬರುವಂತೆ ನಮ್ಮ ಮೇಲೆ ಒತ್ತಡ ಹೇರಿದ್ದರಿಂದಾಗಿ ರಾಜ್ಯಾದ್ಯಂತ ಅದೆಷ್ಟು ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗಿದೆ. ಇದರಿಂದ ಹಲವು ವಿದ್ಯಾರ್ಥಿನಿಯರು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಮಗೆ ನಮ್ಮ ಧರ್ಮ, ಶಿಕ್ಷಣ ಎರಡೂ ಮುಖ್ಯ. ಹಿಜಾಬ್ ತೆಗೆದು ತರಗತಿಗೆ ಹೋಗುವ ಮಾತಿಲ್ಲ. ಶಿಕ್ಷಣ ಹಾಗೂ ಹಿಜಾಬ್ ಎರಡೂ ವಿಚಾರವಾಗಿ ನಮ್ಮ ಹೋರಾಟ ಮುಂದುವರೆಯುತ್ತೆ ಎಂದು ತಿಳಿಸಿದ್ದಾರೆ.