ಬೆಂಗಳೂರು: ಎಲ್ಲಾ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುತ್ತವೆ. ಪಕ್ಷ ನಡೆಸಲು ದೇಣಿಗೆ, ಶುಲ್ಕಗಳು ಸಾಮಾನ್ಯ ಸಂಗತಿ ಆದರೆ ಶ್ರೀಮಂತ ಪಕ್ಷ ಬಿಜೆಪಿಗೆ 40% ಕಮಿಷನ್ ಲೂಟಿಯ ಹಣ, ಸಿಎಂ ಹುದ್ದೆಯಿಂದ 2,500 ಕೋಟಿ ಹಣ, ಸರ್ಕಾರಿ ಹುದ್ದೆಗಳ ಮಾರಾಟದ ಹಣ, ಚುನಾವಣಾ ಬಾಂಡ್ ಗಳ ಹಣವಿರಬಹುದು ನಮಗೆ ದೇಣಿಗೆ ಹಣವಷ್ಟೇ ಆಸರೆ, ಭ್ರಷ್ಟ ಹಣವಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಸಿಎಂ ಹುದ್ದೆಗೆ 2,500 ಕೋಟಿ ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ಹೆಚ್ಚಲ್ಲ ಅಲ್ಲವೇ ಬಿಜೆಪಿ ಕರ್ನಾಟಕ? ಕೆ.ಎಸ್.ಈಶ್ವರಪ್ಪ ಅವರೇ ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ 500 ಕೋಟಿ ಎಣಿಸುದಕ್ಕಾ, 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ್ ಪಾಟೀಲ್ ಜೀವ ತೆಗೆದಿರಾ? ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಶುಲ್ಕ ನಿಗದಿ ಮಾಡಿರುವುದನ್ನು ವ್ಯಂಗ್ಯವಾಡಿದ್ದ ಬಿಜೆಪಿ, 2018ರಲ್ಲಿ ನಾಮಪತ್ರ ಸಲ್ಲಿಸಲು ಕಾರ್ಯಕರ್ತರಿಂದ ಡಿ.ಕೆ.ಶಿವಕುಮಾರ್ 50-100 ರೂಪಾಯಿ ಎಂದು ಭಿಕ್ಷೆ ಬೇಡಿದರು. ಕೋಟಿ ಕೋಟಿ ರೂಪಾಯಿ ಆಸ್ತಿ ಇದ್ದರೂ ಈಗ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಲಕ್ಷ ಲಕ್ಷ ಲೂಟಿ ಮಾಡಲು ಹೊರಟಿದೆ. ಇದರಿಂದ ಆಕಾಂಕ್ಷಿಗಳ ಜೇಬು ಖಾಲಿಯಾಗಲಿದೆ ಹೊರತು ಖಾಲಿಯಾದ ಜೇಬಿಗೆ ಟಿಕೆಟ್ ಬರುವುದಿಲ್ಲ ಎಂದು ಲೇವಡಿ ಮಾಡಿತ್ತು.