ಮಡಿಕೇರಿ: ತಮ್ಮ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಡಲು ಶುರು ಮಾಡಿದರೆ ಬಿಜೆಪಿ ನಾಯಕರು ಓಡಾಡಲು ಆಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಪ್ರತಿಭಟನೆಗೂ ಒಂದು ರೀತಿ ನೀತಿಯಿದೆ. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಯಾಕೆ ಮಾಡುತ್ತಿದ್ದಾರೆ ? ತಮ್ಮ ಆಡಳಿತದಲ್ಲಿನ ಹುಳುಕು ಮುಚ್ಚಿಕೊಳ್ಳಲು ಇಂತಹ ಕೆಲಸ ಮಾಡುತ್ತಿದ್ದಾರೆ. ಕಾರಿನ ಮೇಲೆ ಮೊಟ್ಟೆ ಒಗೆಯಲು ಮುಂದಾಗಿದ್ದಾರೆ. ನಮಗೂ ಮೊಟ್ಟೆ ಒಗೆಯಲು ಬರುತ್ತೆ. ನಾವು ಹೋರಾಟ ಶುರು ಮಾಡಿದರೆ ಸಿಎಂ ಬೊಮ್ಮಾಯಿ ಅವರು ಓಡಾಡಲು ಆಗಲ್ಲ ಎಂದು ಗುಡುಗಿದರು.
ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲು ಆರಂಭಿಸಿದರೆ ಬಿಜೆಪಿ ನಾಯಕರು ಇದೇ ಕೊಡಗಿನಲ್ಲಿ ಓಡಾಡಲು ಆಗಲ್ಲ. ಬಿಜೆಪಿಯವರು ದುಡ್ಡುಕೊಟ್ಟು ಜನರನ್ನು ಕರೆತಂದು ಕಾರ್ಯಕರ್ತರು ಎಂದು ಹೇಳಿ ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾರಣ ಇವರು ಮಾಡಿದ ಕಳಪೆ ರಸ್ತೆ ಕಾಮಗಾರಿ, ಮಳೆಹಾನಿಗೆ ಪರಿಹಾರ ನೀಡದ ಬಗ್ಗೆ ನನಗೆ ಗೊತ್ತಾಗಬಾರದು, ಈ ಬಗ್ಗೆ ನಾನು ಮಾತನಾಡಬಾರದು ಎಂದು. ಜನರ ಗಮನ ಬೇರೆಡೆ ಸೆಳೆಯಲು ರಸ್ತೆಯಲ್ಲಿ ಪ್ರತಿಭಟನೆ, ಮೊಟ್ಟೆ ಎಸೆಯುವ ಕೆಲಸ ಮಾಡಿಸಿದ್ದಾರೆ. ಹೇಡಿಗಳು ಮಾಡುವ ಕೆಲಸವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.