ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಓರ್ವ ಮಹಿಳೆಯ ಮೂಲಕ ನನ್ನ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ. ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು ನಡೆದಿದೆ. ಡಿ.ಕೆ.ಶಿವಕುಮಾರ್ ರಾಜಕಾರಣಿಯಾಗಲು ಆಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಲು ಯತ್ನಿಸಿದ. ಆದರೂ ದೇವರ ದಯೆಯಿಂದ ನನ್ನ ಪತ್ನಿ, ಮಕ್ಕಳು, ಸಹೋದರರು ನನ್ನ ಜೊತೆಯಿದ್ದಾರೆ. ವೈಯಕ್ತಿಕ ಜೀವನಕ್ಕೆ ತೊಂದರೆಯಾದರೆ ಸಹಾಯ ಮಾಡಬೇಕು. ಆದರೆ ಷಡ್ಯಂತ್ರ ನಡೆಸಿ ವೈಯಕ್ತಿಕ ಜೀವನ ಹಾಳು ಮಾಡಲು ನೋಡಿದರು ಎಂದು ಆರೋಪಿಸಿದರು.
ಡಿಕೆಶಿ ಸಿಡಿ ಬಿಡುಗಡೆ ಮಾಡಿಸಿ ನನ್ನ ವೈಯಕ್ತಿಕ ಬದುಕು ಹಾಳು ಮಾಡಿಸಿ ತೇಜೋವಧೆ ಮಾಡಿದ. ನನ್ನ ವಿರುದ್ಧ ಸಿಡಿ ಷಢ್ಯಂತ್ರ ನಡೆಸಿದ್ದು ಡಿಕೆಶಿ. ಓರ್ವ ಮಹಿಳೆ ಮೂಲಕ ತೇಜೋವಧೆ ಮಾಡಿಸಿದ. ಸಿಡಿ ಬಿಡುಗಡೆ ಮಾಡಿದ ದಿನ ಅನಿವಾರ್ಯವಾಗಿ ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಯ್ತು. ಡಿಕೆಶಿ ಷಡ್ಯಂತ್ರದ ಬಗ್ಗೆ ನನ್ನ ಬಳಿ 128 ಸಾಕ್ಷ್ಯ್ ಗಳಿವೆ. ಆದರೆ ಯಾವುದನ್ನೂ ಬಿಡುಗಡೆ ಮಾಡಲ್ಲ ಎಲ್ಲವನ್ನೂ ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತೇನೆ.
ಡಿ.ಕೆ.ಶಿವಕುಮಾರ್ ಲೂಟಿ ಮಾಡಿ ಕೋಟ್ಯಂತರ ರೂಪಾಯಿ ಮಾಡಿದ್ದಾನೆ. ನಾವು ಸಹೋದರರಂತೆ ಇದ್ದೆವು. ಆದರೆ ಡಿ.ಕೆ.ಶಿವಕುಮಾರ್ ಹಾಗೂ ನನ್ನ ಸಂಬಂಧ ಹಾಳಾಗಲು ಆ ಶಾಸಕಿ ಕಾರಣ. ನಮ್ಮಿಬ್ಬರ ಸಂಬಂಧ ಹಳಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಕಾರಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ್ದಾರೆ.