ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಲು ಬಂದ ವಿ.ಸೋಮಣ್ಣ ವಿರುದ್ಧ ಕೆರಳಿ ಕೆಂಡವಾದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ನಲ್ಲಿ ಮಾತುಗಳು ನಡೆಯಲ್ಲ, ಶೋಷಿತ ಸಮುದಾಯಗಳಿಗೆ ಏನು ಮಾಡಿದ್ದೀರಿ? ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯನವರು ಬಿಜೆಪಿ ಟೀಕಿಸುವುದು ಬೇಡ. ಬದಲಿಗೆ ದೇವರಾಜ ಅರಸು, ಬಂಗಾರಪ್ಪ, ಗೋಪಾಲಗೌಡ, ಸಾಹುಕಾರ್ ಚೆನ್ನಯ್ಯನವರ ದಾರಿಯಲ್ಲಿ ಸಾಗಲಿ. ಅವರ ರೀತಿ ಚಿಂತನೆ, ಮಾತುಗಳನ್ನಾಡಬೇಕು ಎಂದು ಸಲಹೆ ನೀಡಿದರು.
ವಸತಿ ಸಚಿವರ ಸಲಹೆಗೆ ಕೆರಳಿದ ಸಿದ್ದರಾಮಯ್ಯ, ನಾನು ಸಿದ್ದರಾಮಯ್ಯ, ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದೂ ಇಲ್ಲ, ನಾನು ಗಾಂಧಿ, ಅಂಬೇಡ್ಕರ್ ಅವರನ್ನು ಹೋಲಿಸಿಕೊಳ್ಳಲು ಆಗುತ್ತಾ? ನನ್ನ ವ್ಯಕ್ತಿತ್ವವೇ ಬೇರೆ, ಬೇರೆಯವರ ವ್ಯಕ್ತಿತ್ವವೇ ಬೇರೆ ಎಂದು ಗರಂ ಆದರು.
ಕೋಪಗೊಂಡ ಸಿದ್ದರಾಮಯ್ಯ ಅವರನ್ನು ಮತ್ತೆ ಸಮಾಧಾನ ಮಾಡಲು ಮುಂದಾದ ಸೋಮಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಸಿದ್ದರಾಮಯ್ಯ, ಕೂತ್ಕೊಳ್ರಿ ಸಾಕು, ನಿಮ್ಮಿಂದ ನನಗೆ ಸರ್ಟಿಫಿಕೆಟ್ ಬೇಡ. ಐ ಆಮ್ ಸಿದ್ದರಾಮಯ್ಯ, ನಾನು ಯಾರಂತೆಯೂ ಆಗಬೇಕಿಲ್ಲ, ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ… 1970ಕ್ಕಿಂತ ಮೊದಲಿನ ರಾಜಕಾರಣವೇ ಬೇರೆ. ಅಂದು ಜನ ಪ್ರಾಮಾಣಿಕರಾಗಿದ್ದರು. ಇಂದು ಪರಿಸ್ಥಿತಿ ಬದಲಾಗಿದೆ… ನ್ಯಾಯಯುತವಾಗಿ ಚುನಾವಣೆ ಎದುರಿಸುತ್ತೇನೆ ಎಂದು ಇಂದು ಯಾರು ಎಷ್ಟೇ ಹೇಳಿದರೂ ಅದು ಆತ್ಮವಂಚನೆ ಮಾಡಿಕೊಂಡು ರಾಜಕಾರಣ ಮಾಡಿದಂತೆ ಎಂದು ಗುಡುಗಿದರು.