ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ತಪ್ಪಲು ಸಚಿವ ಮುರುಗೇಶ್ ನಿರಾಣಿ ಕಾರಣ ಎಂಬ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಕ್ಕೆ ಕಿಡಿಕಾರಿರುವ ಸಚಿವ ನಿರಾಣಿ, ನನ್ನ ವಿರುದ್ಧ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ನಾನು ಪಂಚಮಸಾಲಿ ಮೀಸಲಾತಿ ತಪ್ಪಿಸಲೆಂದು ಇಂತವರ ಜೊತೆಗೆ ಮಾತನಾಡಿದ್ದೇನೆ. ಇಂಥಹ ಜಾಗದಲ್ಲಿ ಭಾಷಣ ಮಾಡಿದ್ದೇನೆ ಎಂದು ಸ್ವಾಮೀಜಿ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.
ಒಂದುವೇಳೆ ಸಾಬೀತು ಪಡಿಸಲು, ಸಾಕ್ಷಿ ಕೊಡಲು ಅವರು ವಿಫಲರಾದರೆ ಸನ್ಯಾಸತ್ವ ತ್ಯಜಿಸಿ ರಾಜಕೀಯಕ್ಕೆ ಬರಲಿ ಎಂದು ಸವಾಲು ಹಾಕಿದರು.
ನಿಮ್ಮ ಪೀಠದಿಂದ ನಿಮ್ಮ ಕ್ಷೇತ್ರ ಹುನಗುಂದ ಪಂಚಮಸಾಲಿ ಸಮಾಜದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಗೆಲ್ಲಿಸಲು ಆಗಿಲ್ಲ. ಬಾಗಲಕೋಟೆಯಲ್ಲಿ ಎಂಪಿ ಸ್ಥಾನಕ್ಕೆ ವೀಣಾ ಕಾಶಪ್ಪನವರ್ ಗೆಲ್ಲಿಸಲು ಆಗಿಲ್ಲ. ಧಾರವಡದಲ್ಲಿ ವಿನಯ ಕುಲ್ಕರ್ಣಿ ಸಹ ಗೆಲ್ಲಲಿಲ್ಲ. ಅಭ್ಯರ್ಥಿಯನ್ನು ಗೆಲ್ಲಿಸುವುದು ಅಥವಾ ಕೆಡವುವುದು ಜನರ ಕೈಯಲ್ಲಿರುತ್ತದೆ ಎಂದು ಹೇಳಿದ್ದಾರೆ.