ಬೆಳಗಾವಿ; ತಮ್ಮ ವಿರುದ್ಧ ಕೇಳಿ ಬಂದಿರುವ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ, ಇದು ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವ್ಯಶ್ರೀ, ನಾನು ಕಳೆದ 15 ದಿನಗಳಿಂದ ಭಾರತದಲ್ಲಿ ಇರಲಿಲ್ಲ. ಪ್ರಶಸ್ತಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಹೋಗಿದ್ದೆ. ನಿನ್ನೆಯಷ್ಟೇ ನಾನು ಭಾರತಕ್ಕೆ ಬಂದಿದ್ದೇನೆ. ನಾನು ವಾಪಸ್ ಬರುವಷ್ಟರಲ್ಲಿ ನನ್ನ ವಿರುದ್ಧ ಇದೀಗ ಇಲ್ಲಸಲ್ಲದ ಆರೋಪಗಳು ಕೇಳಿಬರುತ್ತಿವೆ, ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇದು ನನ್ನ ವಿರುದ್ದ ನಡೆದಿರುವ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಗ್ಗೆ, ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ವಿಡಿಯೋ ಹರಿಬಿಟ್ಟಿರುವುದರ ಬಗ್ಗೆ ಈಗಾಗಲೇ ಕಮಿಷನರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಕೂಡ ಮಾಡಲಾಗಿದೆ. ಪಕ್ಷದ ಹೆಸರನ್ನು ಎಳೆದು ತರಲಾಗುತ್ತಿದೆ. ಈ ರೀತಿ ಮಾಡುತ್ತಿರುವುದರ ಹಿಂದೆ ಬೇರೆಯದೇ ಕೈವಾಡವಿದೆ ಎಂದು ಹೇಳಿದ್ದಾರೆ.
ರಾಜಕುಮಾರ್ ಅವರಿಗೆ ನಾನು ಯಾವುದೇ ತೊಂದರೆ ನೀಡಿಲ್ಲ. ಅವರು ಮಾಡುತ್ತಿರುವ ಆರೋಪ ಸುಳ್ಳು. ನನಗೆ ಒಂದು ದಿನ ಕಾಲಾವಕಾಶ ನೀಡಿ. ನಾಳೆ ಎಲ್ಲಾ ದಾಖಲೆ ಸಮೇತವಾಗಿ ನಾನೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುತ್ತೇನೆ ಎಂದು ತಿಳಿಸಿದರು.
ಇನ್ನು ನವ್ಯಶ್ರೀ 2018ರಲ್ಲಿ ಚನ್ನಪಟ್ಟಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ನವ್ಯ ಫೌಂಡೇಶನ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.