ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಸಹೋದರ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವರು, ನಾನು ಭ್ರಷ್ಟಾಚಾರ ರಹಿತ, ಕಳಂಕರಹಿತ ರಾಜಕಾರಣಿ. ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವತ್ಥನಾರಾಯಣ, ಕಾಂಗ್ರೆಸ್ ನಾಯಕರಿಗೆ ಒಬ್ಬನೇ ಒಬ್ಬ ಅಭ್ಯರ್ಥಿಗೆ ಸಹಾಯ, ಶಿಫಾರಸು ಮಾಡಲು ಆಗಿಲ್ಲ, ಆರೋಪ ಮಾಡಿರುವ ಡಿ.ಕೆ.ಶಿವಕುಮಾರ್ ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಯಾವ ವ್ಯಕ್ತಿ ಯಾರಿಗೆ ಕರೆ ಮಾಡಿದರು ಎಂಬುದನ್ನು ಡಿಕೆಶಿ ಸ್ಪಷ್ಟಪಡಿಸಲಿ ಎಂದರು.
ಯಾವ ಆಧಾರದ ಮೇಲೆ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಆರೋಪ ಮಾಡಿದರು ? ನಾನು ರಾಜಕೀಯವಾಗಿ ಕಳಂಕರಹಿತವಾಗಿ ಬೆಳೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ ನಾಯಕರು ವ್ಯವಸ್ಥಿತ ಷಡ್ಯಂತ್ರ ನಡೆಸಿ ಆರೋಪ ಮಾಡುತ್ತಿದ್ದಾರೆ. ಸತೀಶ್ ಬಗ್ಗೆ ದಾಖಲೆಯೇನಾದರೂ ಕೊಟ್ಟಿದ್ದಾರಾ ? ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಿ ವರದಿ ಬರಲಿ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದರು.
ಅನಗತ್ಯವಾಗಿ ಆರೋಪ ಮಾಡಿ ಮಸಿ ಬಳಿಯುವ ಕೆಲಸ ಮಾಡಬಾರದು. ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು ಎಂಬುದೇ ನನ್ನ ಆಶಯ. ಕೆಲವರು ರಾಜಕೀಯಕ್ಕೆ ಬಂದ ಮೇಲೆ ಮನುಷತ್ವ, ಸೂಕ್ಷ್ಮತೆಯನ್ನೂ ಮರೆತು ಬಿಡುತ್ತಾರೆ. ಡಿ.ಕೆ. ಶಿವಕುಮಾರ್ ಕೂಡ ಹಾಗೇ. ಕಡು ಭ್ರಷ್ಟರು ಎಂದರೆ ಡಿಕೆಶಿ ಹಾಗೂ ಉಗ್ರಪ್ಪ. ಈ ಬಗ್ಗೆ ನಾನು ಹೊಸದಾಗಿ ಹೇಳಬೇಕಿಲ್ಲ. ಮುಂದಿನ ದಿನಗಳಲ್ಲಿ ಅವರ ಬಂಡವಾಳ ಬಯಲು ಮಾಡುತ್ತೇನೆ ಎಂದು ಕಿಡಿಕಾರಿದರು.