ಶಿವಮೊಗ್ಗ: ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಗಿದ್ದಾರೆ. ಪುತ್ರಿಯ ನಿರ್ಧಾರಕ್ಕೆ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜನಂದಿನಿ ಬಿಜೆಪಿ ಸೇರ್ಪಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡಿ ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ರಾಜನಂದಿನಿ ಸಾಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮಗಳು ರಾಜನಂದಿನಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿರುವ ಕಾಗೋಡು ತಿಮ್ಮಪ್ಪ, ನನ್ನ ಮಗಳು ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿರಲಿಲ್ಲ. ಆಕೆ ಹೀಗೆ ಮಾಡ್ತಾಳೆ ಎಂದುಕೊಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜನಂದಿನಿ ಬಿಜೆಪಿ ಸೇರ್ಪಡೆ ಹಿಂದೆ ಶಾಸಕ ಹರತಾಳು ಹಾಲಪ್ಪ ಕೈವಾಡವಿದೆ. ಆಕೆ ಹೀಗೆ ಮಾಡಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ. ರಾಜಕೀಯದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಂಡು ಬೆಳೆದು ಬಂದವರು ನಾವು. ನನಗೆ ಪಕ್ಷದ ಸಿದ್ಧಾಂತವನ್ನು ಒಪ್ಪಿ ಕೆಲಸ ಮಾಡಿದ ಸಮಾಧಾನವಿದೆ. ಅದೇನೇ ಇರಲಿ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.