ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿಯವರದ್ದು ಮನೆ, ಊರು ದಾಟಿದ ಸಾಮರ್ಥ್ಯ ಎಂದು ಲೇವಡಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಾನು ಸಿ.ಟಿ.ರವಿ ವಿಚಾರಕ್ಕೆ ಹೋಗಿಲ್ಲ, ಹೀಗಿರುವಾಗ ಅವರು ನನ್ನ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ? ನಮ್ಮದು ಊರಾಚೆ ಸಾಮರ್ಥ್ಯ ಎಂದು ಟೀಕಿಸಿದ್ದಾರೆ. ಸಿ.ಟಿ ರವಿಯ ಇತಿಹಾಸ ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಶಿಕ್ಷಕರೊಬ್ಬರು ಕೆ.ಆರ್.ಎಸ್ ನಿಂದ ಬಿದ್ದು ಯಾಕೆ ಸತ್ತರು? ಈ ಬಗ್ಗೆ ಹೇಳ್ತೀರಾ ರವಿಯವರೇ…? ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರವಿರಲಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನದೆಸಿದ್ದ ಜೆಡಿಎಸ್, ರಾಜ್ಯ ಸರ್ಕಾರ ನಪುಂಸಕವಾಗಿರುವುದು ದಿಟ. ಬರಡು ಭೂಮಿಯಂತೆ ಯಾವ ಪ್ರಯೋಜನವು ಇಲ್ಲದ ರಾಜ್ಯ ಸರ್ಕಾರವಿದು. ಸಾರ್ವಜನಿಕರ ಹಣ ಬಾಚುವ, ದೋಚುವುದಷ್ಟೆ ಇವರ ಕಾಯಕ. ಒಟ್ಟಿನಲ್ಲಿ, ಕೇಂದ್ರದ ತಾಳಕ್ಕೆ ಕುಣಿಯುತ್ತಾ, ರಾಜ್ಯದ ನೆಮ್ಮದಿ ಕಸಿಯುವ ಕೀಚಕ ಸರ್ಕಾರವನ್ನು ಜನರು ಕಿತ್ತೊಗೆಯುವುದು ಸತ್ಯ ಎಂದು ಹೇಳಿತ್ತು. ಜೆಡಿಎಸ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಿ.ಟಿ.ರವಿ ನಮ್ಮದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ, ಊರು ದಾಟಿದ ಸಾಮರ್ಥ್ಯ ಎಂದು ಹೇಳಿದ್ದರು.