ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಯಾವುದೇ ಕುಟುಂಬದಲ್ಲಾಗಲಿ ಇಂತಹ ಸ್ಥಿತಿ ಯಾರಿಗೂ ಬರಬಾರದು. ಮನುಷತ್ವ, ಮಾನವೀಯತೆಯೂ ಇಲ್ಲದಂತವರು ಮಾಡುವ ಕೃತ್ಯವಿದು ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಆಸಿಡ್ ದಾಳಿ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಹೆಣ್ಣು ಮಗಳ ಬದುಕನ್ನೆ ಆರೋಪಿ ಹಾಳು ಮಾಡಿದ್ದಾನೆ ಆಕೆ ಜೀವನಪೂರ್ತಿ ಸಂಕಟಪಡುವಂತೆ ಮಾಡಿದ್ದಾನೆ. ಯಾರೊಬ್ಬರೂ ಮತ್ತೆ ಇಂತಹ ಕೃತ್ಯ ಮಾಡಬಾರದು. ಹಾಗಾಗಿ ಸಾರ್ವಜನಿಕವಾಗಿ ಆರೋಪಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ನನ್ನ ತಾಯಿ ಮೇಲೂ ಆಸಿಡ್ ದಾಳಿಯಾಗಿತ್ತು. ಅವರು ಇಂದಿಗೂ ಪ್ರತಿದಿನ ಕೊರಗುತ್ತಾರೆ. ಸಂಕಟ ಪಡುತ್ತಿದ್ದಾರೆ. ಆ ನೋವನ್ನು ನಾವು ಪ್ರತಿದಿನ ಕಣ್ಣಾರೆ ನೋಡುತ್ತಿದ್ದೀವಿ. ನನ್ನ ತಾಯಿ ದೈವ ಭಕ್ತೆಯಾಗಿದ್ದರಿಂದ ಗಟ್ಟಿ ಮನಸ್ಸು ಮಾಡಿ ಮಾನಸಿಕವಾಗಿ ಸದೃಢವಾಗಿ ಬದುಕುತ್ತಿದ್ದಾರೆ. ನನ್ನ ತಾಯಿ ಬದುಕಿದ್ದೇ ಒಂದು ಚಮತ್ಕಾರ ಎಂದು ಕುಟುಂಬದಲ್ಲಾದ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.