ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಿತ್ತಾಟ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದ್ದು, ಭ್ರಷ್ಟಾಚಾರದ ಜೊತೆಗೆ ಕೌಟುಂಬಿಕ ವಿಚಾರವೂ ಚರ್ಚೆಗೆ ಬರುತ್ತಿದೆ. ಆರ್ ಟಿ ಐ ಕಾರ್ಯಕರ್ತ ಗಂಗರಾಜು ಹಾಗೂ ಡಿ.ರೂಪಾ ಆಡಿಯೊ ವೈರಲ್ ಬೆನ್ನಲ್ಲೇ ರೂಪಾ ಸಾಲು ಸಾಲು ಫೇಸ್ ಬುಕ್ ಪೋಸ್ಟ್ ಗಳನ್ನು ಹಾಕಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಚರ್ಚೆಯಾಗಲಿ ಎಂದಿದ್ದಾರೆ.
ದಯವಿಟ್ಟು ನಾನು ಹೇಳಿದ ಭ್ರಷ್ಟಾಚಾರದ ವಿಷಯ ಮಾತ್ರ ಚರ್ಚೆಯಾಗಲಿ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನೂ ನಾನು ತಡೆದಿಲ್ಲ. ಇದೇ ವೇಳೆ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದಾದರೆ ರಾಜ್ಯದಲ್ಲಿ ಓರ್ವ ಐಎ ಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಓರ್ವ ಐಪಿಎಸ್ ಅಧಿಕಾರಿ ಮೃತಪಟ್ಟರು. ಕರ್ನಾಟಕದಲ್ಲಿ ಐಎ ಎಸ್ ದಂಪತಿ ಡಿವೋರ್ಸ್ ಪಡೆದುಕೊಂಡರು. ಆದರೆ ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಯಾರು? ಅವರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿ. ಇಲ್ಲದಿದ್ದರೆ ಇನ್ನು ಹಲವು ಕುಟುಂಬಗಳು ನಾಶವಾಗುತ್ತವೆ ಎಂದು ಬರೆದುಕೊಂಡಿದ್ದಾರೆ.
ನಾನು ಧೈರ್ಯವಂತ ಮಹಿಳೆ. ನಾನು ಹೋರಾಡುತ್ತೇನೆ. ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ. ಅಂತಹ ಮಹಿಳೆಯರ ಪರ ನಾನಿದ್ದೇನೆ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿ. ಅದನ್ನು ಮುಂದುವರೆಸೋಣ ಧನ್ಯವಾದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.