ಗದಗ: ನಾನು ನಾಮಪತ್ರ ಸಲ್ಲಿಸಲು ಎಸಿ ಕಚೇರಿಗೆ ಹೋಗಿದ್ದ ವೇಳೆ ನನ್ನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲದೇ ಬಳಿಕ ನನ್ನ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ ಎಂದು ಗದಗ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಆರೋಪಿಸಿದ್ದಾರೆ.
ನಾನು ನಿನ್ನೆ ಸಾಂಕೇತಿಕ ನಾಮಪತ್ರ ಸಲ್ಲಿಸಲು ಎಸಿ ಕಚೇರಿಗೆ ಹೋದಾಗ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ್ ಕೂಡ ಆಗಮಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ವಾಪಸ್ ಬರುವಾಗ ಕಾಂಗ್ರೆಸ್ ಮೆರವಣಿಗೆ ಬಂತು. ನನ್ನ ಕಾರ್ ಮುಂದೆ ಬಂದು ಘೋಷಣೆ ಕೂಗಿದರು. ನಾನು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮಜ್ಜಿಗೆ ಕುಡಿದು ಉಗುಳಿದ್ದಾರೆ. ನನ್ನ ಕಾರಿನ ಮೇಲೆ ಚಪ್ಪಲಿ, ಕಲ್ಲು ಎಸೆದಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ರೌಡಿ ಶೀಟರ್ ಗಳ ವರ್ತನೆ ಮಿತಿ ಮೀರಿದೆ. ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ತಂದು ಕಾರ್ ಸುಟ್ಟುಬಿಡಿ ಎಂದು ಕೆಲವರು ಹೇಳುತ್ತಿದ್ದಂತೆ ಕೆಲವರು ಪೆಟ್ರೋಲ್ ಸುರಿಯಲು ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ನಮ್ಮ ಕಾರ್ಯಕರ್ತ ಪೆಟ್ರೋಲ್ ಬಾಟಲ್ ಕಸಿದುಕೊಂಡಿದ್ದಾನೆ. ಹೆಚ್.ಕೆ.ಪಾಟೀಲ್ ಸೋಲಿನ ಭೀತಿಯಿಂದ ಹೀಗೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.