ಬೆಂಗಳೂರು: ಮಾಂಸಾಹಾರ ಸೇವಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿದ್ದ ವಿಚಾರ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಮಾಂಸಾಹಾರ ಸೇವಿಸಿ ದೇಗುಲಕ್ಕೆ ಹೋದರೆ ತಪ್ಪೇನು? ಎಂದು ಪ್ರಶ್ನಿಸುವ ಮೂಲಕ ತಮ್ಮ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಗೆ ಮಳೆಹಾನಿ ವೀಕ್ಷಿಸಲು ತೆರಳಿದ್ದ ಸಿದ್ದರಾಮಯ್ಯ ಕೂಡ್ಲಿಪೇಟೆಯ ಬಸವೇಶ್ವರ ದೇಗುಲಕ್ಕೆ ತೆರಳಿದ್ದರು. ದೇಗುಲಕ್ಕೆ ತೆರಳುವ ಮುನ್ನ ಮಾಂಸಾಹಾರ ಸೇವನೆ ಮಾಡಿದ್ದರು. ಮಂಸಾಹಾರ ಸೇವಿಸಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು? ನಾನು ಊಟ ಮಾಡಿದ್ದು ಸುದರ್ಶನ ಗೆಸ್ಟ್ ಹೌಸ್ ನಲ್ಲಿ. ಸಂಜೆ ನಾನು ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದೆ. ಮಧ್ಯಾಹ್ನ ನಾನ್ ವೆಜ್ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಿದ್ದೆ. ಅದರಲ್ಲಿ ತಪ್ಪೇನಿದೆ? ಇಷ್ಟಕ್ಕೂ ನನ್ನ ಊಟದ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು? ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.