ಕಲಬುರಗಿ: ಯಾರು ಏನೆ ಹೇಳಿದರೂ ನಾನು ನನ್ನ ಕೊನೇ ಉಸಿರಿರುವವರೆಗೂ ಬಡವರಿಗಾಗಿ ಹೋರಾಟ ಮಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಕರ್ನಾಟಕದ ಭೂಮಿ ಪುತ್ರನಾಗಿರುವ ನನ್ನನ್ನು ಎಐಸಿಸಿ ಅಧ್ಯಕ್ಷನನ್ನಾಗಿ ಮಾಡಿರುವುದಕ್ಕೆ ನೀವೆಲ್ಲರೂ ಹೆಮ್ಮೆ ಪಡಬೇಕು ಎಂದರು.
ನನ್ನನ್ನು ಮುಗಿಸಬೇಕು ಎಂದು ಬಿಜೆಪಿ ನಾಯಕರ ಮನಸ್ಸಿಗೆ ಬಂದಿರಬೇಕು. ಇಲ್ಲವಾದರೆ ಖರ್ಗೆ ಹಾಗೂ ಕುಟುಂಬದವರನ್ನು ಮುಗಿಸುತ್ತೇನೆ ಎಂದು ಹೇಳುವ ಧೈರ್ಯ ಯಾರಿಗೆ ಇರುತ್ತದೆ ? ಯಾರೂ ನನ್ನನ್ನು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನ ರಕ್ಷಣೆಗೆ ಸಂವಿಧಾನವಿದೆ. ಕಲಬುರಗಿ, ಕರ್ನಾಟಕದ ಜನರು ದೇಶದ ಜನರು ಬೆನ್ನಿಗಿದ್ದಾರೆ. ಜನರು ನನ್ನೊಂದಿಗಿರುವಾಗ ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ನಲ್ಲಿ ವೋಟ್ ಕೇಳಲು ನಿಮಗೆ ಹಕ್ಕಿದೆ. ಆದರೆ ಕರ್ನಾಟಕದಲ್ಲಿ ಮತ ಕೇಳಲು ಇಲ್ಲಿ ನೀವು ಏನು ಮಾಡಿದ್ದೀರಿ ? ನಾನು ಕರ್ನಾಟಕದಲ್ಲಿ ಹಾಗೂ ನನ್ನ ತವರು ಕಲಬುರಗಿಯಲ್ಲಿ ಕೆಲಸ ಮಾಡಿದ್ದೇನೆ ಹಾಗಾಗಿ ಮತ ಕೇಳುತ್ತಿದ್ದೇನೆ. ಆದರೆ ನೀವು ಇಲ್ಲಿ ಮತ ಕೇಳಲು ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.