ಬೆಂಗಳೂರು: ಸಚಿವ ಅಶ್ವತ್ಥನಾರಾಯಣ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಭೇಟಿ ವಿಚಾರವಾಗಿ ಮಾಜಿ ಸಂಸದೆ, ನಟಿ ರಮ್ಯಾ ಮಾಡಿದ್ದ ಟ್ವೀಟ್ ಗೆ ಇದೀಗ ಕಾಂಗ್ರೆಸ್ ನಿಂದಲೇ ರಮ್ಯಾ ವಿರುದ್ಧ ಟ್ರೋಲ್ ಗೆ ಕರೆ ನೀಡಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥನಾರಾಯಣ ಹಾಗೂ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಭೇಟಿಯಾಗಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಈ ವಿಚಾರವಾಗಿ ರಮ್ಯಾ, ರಾಜಕೀಯ ಪಕ್ಷದವರು ಪಕ್ಷಾತೀತವಾಗಿ ಭೇಟಿಯಾಗುತ್ತಾರೆ. ಎಲ್ಲಾ ಕಾರ್ಯಕ್ರಮಗಳಿಗೂ ಹೋಗುತ್ತಾರೆ. ಸಂಬಂಧಿಗಳು ಸಹ ಆಗಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಈ ಹೇಳಿಕೆ ಅಚ್ಚರಿ ತಂದಿದೆ ಎಂದಿದ್ದರು.
ಅಲ್ಲದೇ ಎಂ.ಬಿ. ಪಾಟೀಲ್ ಪರ ಮಾತನಾಡಿದ್ದ ರಮ್ಯಾ, ಎಂ.ಬಿ. ಪಾಟೀಲ್ ನಿಷ್ಠಾವಂತ ಕಾಂಗ್ರೆಸ್ ನಾಯಕ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದರು.
ರಮ್ಯಾ ಅವರ ಈ ಹೇಳಿಕೆಗೆ ಇದೀಗ ಕಾಂಗ್ರೆಸ್ ಕಚೇರಿಯಿಂದಲೇ ಕಾರ್ಯಕರ್ತರಿಗೆ ರಮ್ಯಾ ವಿರುದ್ಧ ಟ್ರೋಲ್ ಮಾಡುವಂತೆ ಸಂದೇಶ ರವಾನೆಯಾಗಿದೆ ಎಂದು ರಮ್ಯಾ ಆರೋಪಿಸಿದ್ದಾರೆ. ನನ್ನನ್ನು ಟ್ರೋಲ್ ಮಾಡುವ ತೊಂದರೆ ನೀವು ತೆಗೆದುಕೊಳ್ಳಬೇಡಿ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ಟ್ರೋಲ್ ಮಾಡುತ್ತಿರುವ ಸರಣಿ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ.