ದಾವಣಗೆರೆ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಚಿವಾಕಾಂಕ್ಷಿಗಳು ಮಾರ್ಚ್ ಒಳಗೆ ಸಂಪುಟ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ನಾವೆಲ್ಲ ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಸಮರ್ಥರಾಗಿರುವವರಿಗೆ ಈಗಲಾದರೂ ಸಚಿವ ಸ್ಥಾನ ನೀಡಲಿ. ಇನ್ನೂ ವಿಳಂಬ ಮಾಡುವ ಧೋರಣೆ ಸರಿಯಲ್ಲ ಎಂದು ಹೇಳಿದರು.
ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ಪಂಚರಾಜ್ಯಗಳ ಚುನಾವಣೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೂ ಸಂಬಂಧವಿಲ್ಲ. ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ತಡಮಾಡಿದರೆ ಮುಂದೆ ಸಮಯವೇ ಇರುವುದಿಲ್ಲ. ರಾಜ್ಯದಲ್ಲಿಯೂ ಚುನಾವಣೆ ಸಮೀಪಿಸುತ್ತಿದೆ. ಮಾರ್ಚ್ ನಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಹಾಗಾಗಿ ಈಗಲೇ ಮಾಡಬೇಕು ಎಂದರು.
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ವಾ? ನಮಗೂ ಸಚಿವ ಸ್ಥಾನ ಕೊಟ್ಟು ನೋಡಲಿ. ಕೆಲ ಸಚಿವರಂತು ಶಾಸಕರ ಫೋನ್ ಕೂಡ ರಿಸಿವ್ ಮಾಡಲ್ಲ, ಶಾಸಕರ ಪತ್ರಕ್ಕೂ ಉತ್ತರಿಸಲ್ಲ, ಇಂಥ ಸಚಿವರು ಬೇಕಾ? ಹಲವು ಬಾರಿ ಸಚಿವರಾದವರು ತಾವಾಗಿಯೇ ಸ್ಥಾನ ಬಿಟ್ಟು ಕೊಡಲಿ ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.