ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಬ್ರೇಕ್ ಹಾಕುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ ತೆಗೆದುಕೊಂಡಿರುವ ಬೆನ್ನಲ್ಲೇ ಪಾದಯಾತ್ರೆಗೆ ಸರ್ಕಾರ ತಡೆ ನೀಡಲು ಮುಂದಾಗಿದೆ. ಆದರೆ ಯಾವ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ನಾವು ಮುಂದಿಟ್ಟಿರುವ ಹೆಜ್ಜೆ ಹಿಂದಿಡಲ್ಲ. ಪಾದಯಾತ್ರೆ ಮುಂದುವರೆಯಲಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಪ್ರಶ್ನೆ ಬರಲ್ಲ. ನಮಗೆ ಯಾವುದೇ ಪ್ರತಿಷ್ಠೆಯಿಲ್ಲ. ಪಾದಯಾತ್ರೆ ನಿಲ್ಲಿಸಲು ನೋಟೀಸ್ ನೀಡಲಾಗಿದ್ದರೂ ಕೂಡ ಪಾದಯಾತ್ರೆ ಮುಂದುವರೆಯಲಿದೆ. ಕೋವಿಡ್ ಮುಂಜಾಗೃತಾ ಕ್ರಮಗಳೊಂದಿಗೆ ಪಾದಯಾತ್ರೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆ ಇಲ್ಲ ಎಂದು ಹೇಳಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಳೆದ ನಾಲ್ಕು ದಿನಗಳಿಂದ ಪಾದಯಾತ್ರೆ ನಡೆಯುತ್ತಿದೆ. ಸರ್ಕಾರ ಇಷ್ಟು ದಿನ ಪಾದಯಾತ್ರೆ ಯಾಕೆ ನಿಲ್ಲಿಸಿಲ್ಲ. ಈಗ ಕೋವಿಡ್ ನೆಪ ಹೇಳಿ ನಮ್ಮ ಹೋರಾಟಕ್ಕೆ ತಡೆಯೊಡ್ಡಲು ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಾದಯಾತ್ರೆ ನಿಲ್ಲಿಸುವಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ರಾಮನಗರಕ್ಕೆ ತೆರಳುತ್ತಿದ್ದೇನೆ. ಅಲ್ಲಿಯೇ ಎಲ್ಲವನ್ನು ಮಾತನಾಡುತ್ತೇನೆ ಎಂದರು.