ಬೆಂಗಳೂರು: ಅನುದಾನ ಬಿಡುಗಡೆಯಲ್ಲಿ ಸಚಿವರಿಂದ ತಡೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾಶಂಕರ್, ವಿಧಾನಸಭೆಯ ಬಾವಿಗಿಳಿದು ಪ್ರತಿಭಟಿಸಿದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕ ಭೀಮಾಶಂಕರ್, ಕ್ಷೇತ್ರದ ಅನುದಾನಕ್ಕೆ ಸಚಿವರು ತಡೆ ನೀಡಿದ್ದಾರೆ. ಎಲ್ಲಾ 224 ಕ್ಷೇತ್ರಗಳಲ್ಲಿಯೂ ಇದೇ ರೀತಿ ಮಾಡಿದ್ದೀರಾ? ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ನಮ್ಮ ಹಕ್ಕು ಮೊಟಕುಗೊಳಿಸಲಾಗಿದೆ. ನನಗೆ ನ್ಯಾಯ ಕೊಡಿಸಿ ಎಂದು ಸದನದ ಬಾವಿಗಿಳಿದು ಕುಳಿತು ಪ್ರತಿಭಟನೆ ನಡೆಸಿದರು.
ಶಾಸಕರ ಅಸಮಾಧಾನಕ್ಕೆ ಸಚಿವ ಎಂಟಿಬಿ ನಾಗರಾಜ್, ಅನುದಾನ ತಡೆ ಬಗ್ಗೆ ಪರಿಶೀಲನೆ ನಡೆಸಿ ವಿತರಿಸುವುದಾಗಿ ಭರವಸೆ ನೀಡಿದರು. ಆದರೆ ಸಚಿವರ ಸಮಾಧಾನಕ್ಕೂ ಜಗ್ಗದ ಶಾಸಕ, ಕುಳಿತ ಜಾಗದಿಂದ ಕದಲದೇ ಅಲ್ಲಿಯೇ ಕುಳಿತಿದ್ದಾರೆ. ಶಾಸಕರ ವರ್ತನೆಗೆ ಗರಂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮ್ಮ ಜಾಗಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಆದರೂ ಪಟ್ಟು ಬಿಡದ ಶಾಸಕರು ಕುಳಿತ ಜಾಗದಿಂದ ಏಳದೇ ನ್ಯಾಯ ಕೊಡಿಸಿ ಹಠ ಹಿಡಿದಿದ್ದಾರೆ. ಕೋಪಗೊಂಡ ಸ್ಪೀಕರ್, ನಿಮಗೆ ಹೇಗೆ ನ್ಯಾಯಬೇಕೋ ಹಾಗೆ ಪಡೆದುಕೊಳ್ಳಿ ಎಂದು ಗದರಿದ ಪ್ರಸಂಗ ನಡೆದಿದೆ.