ಲಂಡನ್ ಮೂಲದ ಸ್ಟಾರ್ಟಪ್ ನಥಿಂಗ್, ಇವತ್ತಷ್ಟೇ ಫೋನ್(1) ಹೆಸರಿನ ಹೊಸ ಮೊಬೈಲ್ ಅನ್ನು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆಗಿ ಕೆಲವೇ ಗಂಟೆಗಳು ಕಳೆಯುವಷ್ಟರಲ್ಲಿ ಭಾರತದಲ್ಲಿ ‘#DearNothing’ ಎಂಬ ಕ್ಯಾಂಪೇನ್ ಶುರುವಾಗಿದೆ.
ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ನಥಿಂಗ್ ಫೋನ್ 1 ವಿರುದ್ಧ ಅಭಿಯಾನ ಜೋರಾಗಿದೆ. ವನ್‌ಪ್ಲಸ್‌ನ ಮಾಜಿ ಸಂಸ್ಥಾಪಕ ಕಾರ್ಲ್ ಪೀ ಅವರ ನಥಿಂಗ್ ಎಂಬ ಹೊಸ ಸಂಸ್ಥೆಯನ್ನು ದಕ್ಷಿಣ ಭಾರತದ ಟೆಕ್ ಸಮುದಾಯ ತೀವ್ರವಾಗಿ ಟೀಕಿಸಿದೆ. ಇದಕ್ಕೆ ಕಾರಣ ಏನು ಅನ್ನೋದು ನಿಜಕ್ಕೂ ಅಚ್ಚರಿಯ ಸಂಗತಿ.
ಈ ನಥಿಂಗ್ ಫೋನ್ (1) ಲಾಂಚ್ ಕಾರ್ಯಕ್ರಮದ ವಿಡಿಯೋವನ್ನು Prasadtechintelugu ಎಂಬ ಯುಟ್ಯೂಬ್ ಚಾನಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಆದ್ರೆ ಈ ವಿಡಿಯೋ ಕೇವಲ ಪ್ರಾಂಕ್ ಆಗಿತ್ತು. ಜನರು ಫೋನ್ ನೋಡಲು ಕಾತುರದಿಂದ ಕಾಯ್ತಾ ಇದ್ರೆ, ಖಾಲಿ ಡಬ್ಬವನ್ನು ಕ್ರಿಯೇಟರ್ ಓಪನ್ ಮಾಡಿದ್ದ. ಅದರೊಳಗೊಂದು ಚಿಕ್ಕ ಪತ್ರವಿತ್ತು. ಈ ಫೋನ್ ದಕ್ಷಿಣ ಭಾರತದವರಿಗಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಆ ಪತ್ರ ಕೂಡ ನಕಲಿಯೇ. ಆದ್ರೆ ಇದನ್ನು ಮೊಬೈಲ್ ಕಂಪನಿ ಕಳಿಸಿರಲಿಲ್ಲ. ನಥಿಂಗ್ ಬ್ರಾಂಡ್‌ನಿಂದ್ಲೇ ಪತ್ರ ಮತ್ತು ಖಾಲಿ ಡಬ್ಬ ಬಂದಿದೆ ಎಂದುಕೊಂಡ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಡಿಯರ್ ನಥಿಂಗ್ ಎಂಬ ಕ್ಯಾಂಪೇನ್ ಇಲ್ಲಿಂದ್ಲೇ ಹುಟ್ಟಿಕೊಂಡಿದೆ. ಟ್ವಿಟ್ಟರ್ ಬಳಕೆದಾರರು ನಥಿಂಗ್ ಕಂಪನಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮೊಬೈಲ್ ಕಂಪನಿ ಹಿಂದಿ ಭಾಷಿಗರ ಪರವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದ್ರೆ ಈ ಬಗ್ಗೆ ನಥಿಂಗ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.