ಬಾಲಿವುಡ್ ನಟಿ ಸೋನಂ ಕಪೂರ್ ಮನೆಯಲ್ಲಿ ಕಳ್ಳತನವಾಗಿದೆ. ಸೋನಂ ಮತ್ತವರ ಪತಿ ಆನಂದ್ ಅಹುಜಾರ ದೆಹಲಿ ನಿವಾಸಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ಸುಮಾರು 1.41 ಕೋಟಿ ಮೌಲ್ಯದ ಆಭರಣಗಳು ಹಾಗೂ ನಗದನ್ನು ಹೊತ್ತೊಯ್ದಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಸೋನಂ ಅತ್ತೆ ಪ್ರಕರಣ ದಾಖಲಿಸಿದ್ದಾರೆ. ಕಳ್ಳರ ಪತ್ತೆಗಾಗಿ ಈಗಾಗ್ಲೇ ಪೊಲೀಸರು ತಂಡ ರಚಿಸಿದ್ದು, ಕಾರ್ಯೋನ್ಮುಖರಾಗಿದ್ದಾರೆ.
ಸೋನಂ ನಿವಾಸದಲ್ಲಿ ಸುಮಾರು 25 ಸಿಬ್ಬಂದಿಗಳಿದ್ದಾರೆ. 9 ಮಂದಿ ಕೇರ್ ಟೇಕರ್ ಗಳು, ಗಾರ್ಡನರ್ ಗಳು, ಡ್ರೈವರ್ ಗಳು ಕೆಲಸ ಮಾಡ್ತಾರೆ. ಆದ್ರೆ ಯಾರು ಕದ್ದಿರಬಹುದು ಎಂಬ ಬಗ್ಗೆ ಸುಳಿವೇ ಸಿಕ್ಕಿಲ್ಲ. ಕ್ರೈಮ್ ತಂಡ ಹಾಗೂ ಎಫ್ ಎಸ್ ಎಲ್ ತಂಡ ಜೊತೆಯಾಗಿ ತನಿಖೆ ಕೈಗೊಂಡಿದೆ.
22 ಅಮೃತಾ ಶೆರ್ಗಿಲ್ ನಲ್ಲಿ ಈ ಮನೆಯಿದೆ. ಮನೆಯಲ್ಲಿ ಸೋನಂ ಕಪೂರ್ ಅವರ ಮಾವ ಹರೀಶ್, ಅತ್ತೆ ಪ್ರಿಯಾ ಅಹುಜಾ ಹಾಗೂ ಆನಂದ್ ರ ಅಜ್ಜಿ ಸರಳಾ ಅಹುಜಾ ವಾಸಿಸ್ತಾ ಇದ್ರು. ಫೆಬ್ರವರಿ 11ರಂದು ಕಪಾಟಿನಲ್ಲಿದ್ದ ಹಣ ಮತ್ತು ಒಡವೆ ಮಾಯವಾಗಿರೋದು ಅವರ ಗಮನಕ್ಕೆ ಬಂದಿದೆ. ಫೆಬ್ರವರಿ 23ಕ್ಕೆ ಅವರು ಕೇಸ್ ದಾಖಲು ಮಾಡಿದ್ದಾರೆ.
2 ವರ್ಷಗಳ ಹಿಂದೆಯೇ ಆಭರಣಗಳನ್ನೆಲ್ಲ ಪ್ರಿಯಾ ಅಹುಜಾ ಕಪಾಟಿನಲ್ಲಿಟ್ಟಿದ್ದರಂತೆ. ಸಿಸಿ ಕ್ಯಾಮರಾಗಳನ್ನು ಸಹ ಪೊಲೀಸರು ಪರಿಶೀಲಿಸ್ತಿದ್ದಾರೆ. ಸೋನಂ ಪತಿ ಆನಂದ್ ಅಹುಜಾ ಲಂಡನ್ ನಲ್ಲಿ ವಾಸಿಸುತ್ತಿದ್ದು, ಆಗಾಗ ದೆಹಲಿಗೆ ಬಂದು ಹೋಗ್ತಾರೆ. ಅಹುಜಾ ಕುಟುಂಬ ಸಾಯಿ ಎಕ್ಸ್ ಪೋರ್ಟ್ಸ್ ಎಂಬ ಬಟ್ಟೆ ಕಂಪನಿಯನ್ನು ಹೊಂದಿದೆ.
ಆನಂದ್ ಅಹುಜಾರ ತಂದೆ ಹರೀಶ್ ಅವರಿಗೆ ದುಷ್ಕರ್ಮಿಗಳು 27 ಕೋಟಿ ರೂಪಾಯಿ ಪಂಗನಾಮ ಹಾಕಿದ್ದರು. ಈ ಸಂಬಂಧ ಪೊಲೀಸರು 10 ಮಂದಿಯನ್ನು ಬಂಧಿಸಿದ್ದರು. ಸೋನಂ ಹಾಗೂ ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗಷ್ಟೆ ಸಿಹಿ ಸುದ್ದಿ ಹಂಚಿಕೊಂಡಿದ್ದರು.