ಬೆಂಗಳೂರು: ಬಿಬಿಎಂಪಿ ಮೀಸಲಾತಿ ಕ್ರಮ ವಿರೋಧಿಸಿ ಕಾಂಗ್ರೆಸ್ ಮುಖಂಡರು ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆ ನಡೆದಿದೆ.
ಕಂದಾಯ ಅಧಿಕಾರಿಗಳು ಮೀಸಲಾತಿ ಸರಿಯಾಗಿ ಮಾಡಿಲ್ಲ. ಬಿಜೆಪಿ ಶಾಸಕರು, ಸಂಸದರು ಹೇಳಿದಂತೆ ಮೀಸಲಾತಿ ನೀಡಲಾಗಿದೆ. ಮೂರುವರೆ ಸಾವಿರ ಆಕ್ಷೇಪಣೆಗಳು ಬಂದಿದ್ದರೂ ಕೂಡ ಕಡೆಗಣಿಸಲಾಗಿದೆ. ಬಿಟಿಎಂ ಲೇಔಟ್ ನಲ್ಲಿ 9ರಲ್ಲಿ 8 ವಾರ್ಡ್ ಮಹಿಳೆಯರಿಗೆ ಮೀಸಲಿಡಲಾಗಿದೆ. ಅಗತ್ಯವಿಲ್ಲದ ಕಡೆಗಳಲ್ಲಿ ಬಿಸಿಬಿ ಮೀಸಲಾತಿ ನೀಡಲಾಗಿದೆ. 97 ವಾರ್ಡ್ ಗಳಲ್ಲಿ 76 ವಾರ್ಡ್ ಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಬಿಜೆಪಿ ಕಚೇರಿಯಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮೀಸಲಾತಿ ಕ್ರಮವನ್ನು ಸರ್ಕಾರ ಮೊದಲು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.