ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳ್ಲಿ ಹರಿದಾಡುತ್ತಿದ್ದು, ಇದು ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ನಡೆಸುತ್ತಿರುವ ಅಪಪ್ರಚಾರ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕಾಂಗ್ರೆಸ್ ಹಿತದೃಷ್ಟಿಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೆ. ಆದರೆ ಕೋಲಾರ ಟಿಕೆಟ್ ತಪ್ಪಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿದ್ದಾರೆ. ರಾಜ್ಯವನ್ನು ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದ ನನ್ನ ಆಸೆಗೆ ಎಳ್ಳುನೀರು ಬಿಟ್ಟಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಒಬಿಸಿ ವರ್ಗದ ಆಕಾಂಕ್ಷಿಗಳಿಗೆ ಡಿ.ಕೆ. ಶಿವಕುಮಾರ್ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸಿದ್ದರಾಮಯ್ಯ ಬರೆದಿದ್ದಾರೆ ಎಂಬ ನಕಲಿ ಪತ್ರ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸೋಲಿನ ಭೀತಿಯಿಂದ ಹತಾಶರಾಗಿರುವ ಬಿಜೆಪಿ ನಾಯಕರು ನನ್ನ ಹೆಸರಿನ ಖೊಟ್ಟಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಯಾವುದೇ ಪತ್ರವನ್ನು ನಾನು ಬರೆದಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸುಳ್ಳು ಪತ್ರಕ್ಕೆ ಬಲಿಯಾಗಬಾರದು ಎಂದು ವಿನಂತಿಸಿದ್ದಾರೆ.
ನನ್ನ ಹಾಗೂ ಡಿ.ಕೆ. ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ. ಇದಕ್ಕೆ ಹುಳಿ ಹಿಂಡುವ ಕೆಲಸ ಯಶಸ್ಸು ಕಾಣಲಾರದು. ಖೊಟ್ಟಿ ಪತ್ರದ ಬಗ್ಗೆ ಶೀಘ್ರದಲ್ಲಿ ಪೊಲೀಸರಿಗೆ ದೂರು ನೀಡಿ, ಕಿಡಿಗೇಡಿತನದ ಪತ್ರ ಹಂಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.