ಬೆಂಗಳೂರು: ಸ್ವಾತಂತ್ರ್ಯಾನಂತರ ದೇಶದ ಪ್ರಜಾತಂತ್ರದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ. ತಮ್ಮ ಸ್ವಾರ್ಥಕ್ಕಾಗಿ ಇಡಿ ದೇಶವನ್ನೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕತ್ತಲೆಯಲ್ಲಿಟ್ಟರು. ಕಾಂಗ್ರೆಸ್ ನಾಯಕರು ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವ ಮುನ್ನ ಇತಿಹಾಸದ ಪುಟಗಳನ್ನು ತಿರುವಿ ಹಾಕಲಿ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯ, ಡಿಕೆಶಿ, ಮಹಾದೇವಪ್ಪ ಮೊದಲಾದವರಿಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದ ಮಹಾನ್ ಕುಟುಂಬ ಯಾವುದು ಎಂಬುದೇ ಗೊತ್ತಿಲ್ಲ. ಸತ್ಯವನ್ನು ಗ್ರಹಿಸದ ನಿಮ್ಮ ಏಕಮುಖ ರಸ್ತೆಯ ಪ್ರಯಾಣದ ಬಗ್ಗೆ ವಿಷಾದ ಮಾತ್ರ ವ್ಯಕ್ತಪಡಿಸಲು ಸಾಧ್ಯ !
ನಕಲಿ ಗಾಂಧಿ ಕುಟುಂಬದ ವಿರುದ್ಧದ ಧ್ವನಿ ಹತ್ತಿಕ್ಕಲು 21 ತಿಂಗಳ ತುರ್ತು ಪರಿಸ್ಥಿತಿ, ಲಕ್ಷಕ್ಕೂ ಅಧಿಕ ಜನರ ಬಂಧನ, ಜೈಲುವಾಸ, 22 ಕ್ಕೂ ಅಧಿಕ ಸಂಗ್ರಾಮಿಗಳ ಕಸ್ಟಡಿ ಸಾವು- ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ಕಿಡಿಕಾರಿದೆ.
ಮಜಾವಾದಿ ಸಿದ್ದರಾಮಯ್ಯನವರೇ ನೀವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೀರಾ ? ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪರಿಗಣಿಸಲ್ಪಟ್ಟ ತುರ್ತುಪರಿಸ್ಥಿತಿ ವಿರೋಧಿ ಹೋರಾಟದಲ್ಲಾದರೂ ಭಾಗಿಯಾಗಿದ್ದಿರಾ ? ಇಲ್ಲ…… ನಿಮ್ಮದೇನಿದ್ದರೂ ಅಧಿಕಾರದ ಪಾಯಸ ಉಣ್ಣಲು ಹೋರಾಟವಷ್ಟೇ.
ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸುವ ಬುರುಡೆ ರಾಮಯ್ಯ ಅವರೇ, ಘೋಷಿತ ತುರ್ತುಸ್ಥಿತಿಯ ಕರಾಳ ದಿನಗಳ ಬಗ್ಗೆ ಕನ್ನಡಿಗರಿಗೆ ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸುತ್ತಿದ್ದೇವೆ, ಒಪ್ಪಿಕೊಳ್ಳುವಿರಾ ? ಜಲದರ್ಶಿನಿ ವೀರನ ಬಡಾಯಿ ಪರೀಕ್ಷೆಗೆ ಇದೊಂದು ವೇದಿಕೆಯಾಗಲಿ. ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ನಿರ್ಧಾರದ ಬಗ್ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಅಭಿಪ್ರಾಯವೇನು ? ಎಂದು ಪ್ರಶ್ನಿಸಿದೆ.