ಬೆಂಗಳೂರು: ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರದ್ದು ಎಂದೂ ಒಂದಾಗದ ಒಡಕು ಮನಸು. ಬ್ರೇಕ್ ಪಾಸ್ಟ್ ಮೀಟಿಂಗ್‌ನಿಂದ ಇದೆಲ್ಲ ಸರಿ ಹೋಗುವ ಮಾತೇ? ಒಡಕು ಕನ್ನಡಿ, ಮಸುಕು ಪ್ರತಿಬಿಂಬ! ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಸಿದ್ದರಾಮೋತ್ಸವ ಪಕ್ಷದ ವೇದಿಕೆಯಡಿ ನಡೆಯುತ್ತಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರು ತುತ್ತೂರಿ ಊದುತ್ತಿದ್ದಾರೆ. ಹಾಗಾದರೆ ರಾಹುಲ್ ಗಾಂಧಿಯವರನ್ನು ಆಹ್ವಾನಿಸಿದ್ದೇಕೆ? ಸಿದ್ದರಾಮಯ್ಯ ಬಲಪ್ರದರ್ಶನ ಕಂಡು ದೆಹಲಿಯ ನಕಲಿ ಗಾಂಧಿಗಳು ಕಕ್ಕಾಬಿಕ್ಕಿಯಾಗಲಿ ಎಂದೇ? ಎಂದು ಪ್ರಶ್ನಿಸಿದೆ.
ಪಲ್ಲಕ್ಕಿಯನ್ನೂ ನಾನೇ ಹೊರಬೇಕು, ಉತ್ಸವ ಮೂರ್ತಿಯೂ ನಾನೇ ಆಗಬೇಕೆಂದು ಕೆಪಿಸಿಸಿ ಅಧ್ಯಕ್ಷರ ಆಸೆ. ಡಿಕೆಶಿ ಪಲ್ಲಕ್ಕಿ ಹೊರಲಿ, ನಾನು ಉತ್ಸವಮೂರ್ತಿಯಾಗುತ್ತೇನೆ ಎಂಬುದು ವಿಪಕ್ಷ ನಾಯಕರ ದುರಾಸೆ. ಕಾಂಗ್ರೆಸ್ ಪಕ್ಷದಲ್ಲಿ ಜೇನು ಕೊಯ್ಯುವವರು ಯಾರೋ, ಸಿಹಿ ಸವಿಯುವವರು ಇನ್ಯಾರೋ!!! ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿಪೂಜೆಗೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಂತೆ, ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು?ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಕೇಳಿದೆ.
ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ! ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆಶಿ ಪಕ್ಷ ಒಡೆಯುತ್ತಾರೆ. ನಕಲಿ ಗಾಂಧಿಗಳಿಗೀಗ ಇತ್ತ ದರಿ, ಅತ್ತ ಪುಲಿ ಗಾದೆಯ ಅನುಭವ! ಎಂದು ವ್ಯಂಗ್ಯವಾಡಿದೆ.