ಬೆಂಗಳೂರು: ನಂದಿಬೆಟ್ಟದಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ಜಾರಿ ಬಿದ್ದಿದ್ದ ಯುವಕನನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್ ಪಿ ಮುಥುನ್ ಕುಮಾರ್, ಯುವಕ ನಿಶಾಂತ್ ಗುಲ್ಲಾ, ನಂದಿಬೆಟ್ಟದ 100 ಅಡಿಯಿಂದ ಜಾರಿ ಬಿದ್ದಿದ್ದ. ತುಂಬಾ ಅಪಾಯಕಾರಿ ಸ್ಥಳದಲ್ಲಿ ಸಿಲುಕಿಕೊಂಡಿದ್ದ. ವಾಯುಪಡೆ ಹೆಲಿಕಾಪ್ಟರ್ ಮೂಲಕ ಯುವಕನನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಾರಿಬಿದ್ದ ತಕ್ಷಣ ಯುವಕ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾನೆ. ಬಳಿಕ ತಂದೆ-ತಾಯಿಗೂ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಕಾರ್ಯಾಚರಣೆ ನಡೆಸಿ ಯುವಕನ ರಕ್ಷಣೆ ಮಾಡಲಾಗಿದೆ. ಯುವಕನ ಬೆನ್ನಿಗೆ ಗಂಭಿರ ಗಾಯಗಳಾಗಿವೆ. ಕೋಡಿಗೆಹಳ್ಳಿ ಆಸ್ಟರ್ ಸಿಎಂಐ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿದೆ ಎಂದರು.
ಬೆಟ್ಟದಲ್ಲಿ ಟ್ರೆಕ್ಕಿಂಗ್ ಗೆ ಹಲವು ನಿರ್ಬಂಧಗಳನ್ನು ಹಾಕಲಾಗಿದೆ. ಎಲ್ಲಾ ಕಡೆಯಿಂದ ಸಾರ್ವಜನಿಕರು ಟ್ರೆಕಿಂಗ್ ಗೆ ಬರ್ತಾರೆ. ಮುಂದಿನ ದಿನಗಳಲ್ಲಿ ನಂದಿಬೆಟ್ಟದಲ್ಲಿ ಟ್ರೆಕಿಂಗ್ ಗೆ ಕಡಿವಾಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.