ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಬಿರುಮಳೆಗೆ ಜನತೆ ತತ್ತರಿಸಿ ಹೋಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಈ ಮಳೆ ಅವಾಂತರವನ್ನೇ ಸೃಷ್ಟಿಸಿದೆ.
ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಾ ನೀರನ್ನು ಹೊರ ಹಾಕಲು ಶತಪ್ರಯತ್ನ ನಡೆಸಿದ್ದಾರೆ. ಮನೆಯೊಳಗೆ ಮಳೆ ನೀರು ನುಗ್ಗಿರುವ ಪರಿಣಾಮ ಬೆಲೆಬಾಳುವ ವಸ್ತುಗಳು ಹಾಳಾಗಿವೆ.
ಧಾರಾಕಾರ ಮಳೆಯ ಕಾರಣ ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಇನ್ನು ಕೆಲವೊಂದು ರಸ್ತೆಗಳಲ್ಲಿ ಮೊಣಕಾಲುದ್ದದ ನೀರಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ಕಛೇರಿಗೆ ಹೋಗುವವರು ಇನ್ನಿಲ್ಲದಂತೆ ಸಂಕಷ್ಟ ಅನುಭವಿಸಿದ್ದಾರೆ. ಮಳೆ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ ಎನ್ನಲಾಗಿದ್ದು, ಮತ್ಯಾವ ಸಂಕಷ್ಟ ತಂದೊಡ್ಡುತದೋ ಎಂಬ ಆತಂಕ ಜನ ಸಾಮಾನ್ಯರನ್ನು ಕಾಡತೊಡಗಿದೆ.