ಧನ ತ್ರಯೋದಶಿ ದಿನವಾದ ಶನಿವಾರ ಮತ್ತು ಭಾನುವಾರದಂದು ದೇಶದಲ್ಲಿ ದಾಖಲೆ ಮೊತ್ತದ ಚಿನ್ನ ಮಾರಾಟವಾಗಿದೆ. ಈ ಎರಡು ದಿನಗಳಂದು ಸುಮಾರು 25,000 ಕೋಟಿ ರೂ. ಮೊತ್ತದ ಚಿನ್ನಾಭರಣಗಳು ಮಾರಾಟವಾಗಿವೆ ಎಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 35ರಷ್ಟು ಹೆಚ್ಚಳವಾಗಿದೆ.
ಧನ ತ್ರಯೋದಶಿ (ಧನ್ ತೇರಾಸ್) ದಿನದಂದು ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದ್ದು, ಜೊತೆಗೆ ಈ ದಿನಗಳಂದು ಚಿನ್ನಾಭರಣಗಳ ಅಂಗಡಿಯವರು ನೀಡುವ ಆಕರ್ಷಕ ಡಿಸ್ಕೌಂಟ್ ಕೂಡ ಖರೀದಿಸಲು ಪ್ರಮುಖ ಕಾರಣವಾಗಿದೆ. ಹೀಗಾಗಿಯೇ ಈ ಬಾರಿ ದಾಖಲೆ ಮೊತ್ತದ ಚಿನ್ನಾಭರಣ ಮಾರಾಟವಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ಪ್ರಸ್ತುತ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿರುವ ಕಾರಣ ಖರೀದಿಗೆ ಉತ್ಸುಕತೆ ಕಂಡು ಬಂದಿದೆ. ಆನ್ಲೈನ್ ಫ್ಲ್ಯಾಟ್ ಫಾರ್ಮ್ ನಲ್ಲೂ ಸಹ ಚಿನ್ನವನ್ನು ಖರೀದಿಸುತ್ತಿದ್ದು, ಈ ಬಾರಿ ಅಲ್ಲಿಯೂ ಸಹ ಶೇಕಡ 35 ರಿಂದ 40 ರಷ್ಟು ಮಾರಾಟ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.