ಬೆಂಗಳೂರು: ತಮ್ಮ ವಿರುದ್ಧದ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸೇಡಂ ಬಿಜೆಪಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ಮಹಿಳೆ ಹಾಗೂ ಆಕೆಯ ಪತಿ ಇಬ್ಬರ ವಿರುದ್ಧ ಬ್ಲಾಕ್ ಮೇಲ್ ಕೇಸ್ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
2 ಕೋಟಿ ಹಣ ನೀಡುವಂತೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಫೆ.5ರಂದು ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆಕೆ ಹಾಗೂ ಆಕೆಯ ಪತಿ ಇಬ್ಬರನ್ನು ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದರು.
ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ. ನಾನು ಸಾರ್ವಜನಿಕ ಜೀವನದಲ್ಲಿರುವವನು ಇಂತಹ ಆರೋಪ ಸಹಜ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಾನು ಆರೋಪ ಮಾಡಲ್ಲ. ನಾನು ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ. ಕಾನೂನಿನ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.