ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ. ಧರ್ಮಾಚರಣೆಗಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವುದಲ್ಲ, ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿರಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ, ಈಗಾಗಲೇ ಶಿಕ್ಷಣ ಸಚಿವರು ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಸೂಚನೆಯಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಹೊರತು ಯಾವುದೇ ಧರ್ಮ, ಪೂಜೆ ಪುನಸ್ಕಾರಗಳಿಗೆ ಶಾಲೆಯಲ್ಲಿ ಅವಕಾಶವಿಲ್ಲ ಎಂದರು.
ದೇಶದ ಐಕ್ಯತೆ, ಸಮಗ್ರತೆಯ ಭಾವನೆ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಇರಬೇಕು. ನಾವೆಲ್ಲರೂ ಭಾರತಾಂಬೆಯ ಮಕ್ಕಳು, ಜ್ಞಾನಾರ್ಜನೆಗಾಗಿ ಇಲ್ಲಿ ಬಂದಿದ್ದೇವೆ ಎಂಬ ಸಂಸ್ಕಾರ ವಿದ್ಯಾರ್ಥಿಗಳಿಗೆ ಬರಬೇಕು. ವಿದ್ಯಾರ್ಥಿಗಳಲ್ಲಿ ಮತೀಯ ಭಾವನೆಯನ್ನು ಹುಟ್ಟುಹಾಕುವಂತಹ ಸಂಘಟನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.
ಧರ್ಮಾಚರಣೆ, ಪೂಜೆ ಪುನಸ್ಕಾರಗಳಿಗೆ, ಮಂದಿರ, ಮಸೀದಿ, ಚರ್ಚ್ ಗಳಿವೆ. ಅಲ್ಲಿ ನಾವು ಏನು ಬೇಕಾದರೂ ಮಾಡಲು ನಾವು ಸ್ವತಂತ್ರರು. ಆದರೆ ಶಾಲಾ-ಕಾಲೇಜುಗಳಲ್ಲಿ ಅಲ್ಲ. ಯಾರೂ ಕೂಡ ಶಾಲಾ-ಕಾಲೇಜುಗಳಿಗೆ ಹಿಜಾಬ್, ಹಸಿರು ಶಾಲು, ಕೇಸರಿ ಶಾಲುಗಳನ್ನು ಧರಿಸಿ ಬರುವಂತಿಲ್ಲ. ಶಾಲಾ ಮ್ಯಾನೇಜ್ ಮೆಂಟ್ ನಿಯಮದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.