ಭಾರತದಲ್ಲಿ ಓಮಿಕ್ರಾನ್ ಪ್ರಕರಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಕುಟುಂಬ ಮತ್ತು ಆರೋಗ್ಯ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1431ಕ್ಕೆ ಏರಿಕೆಯಾಗಿದೆ. ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೂಪಾಂತರಿಯು ದೇಶದ 23 ರಾಜ್ಯಗಳಿಗೆ ವ್ಯಾಪಿಸಿದೆ ಎಂದು ಸಚಿವಾಲಯ ಹೇಳಿದೆ.
ಈ ನಡುವೆ ದೇಶದಲ್ಲಿ ಶನಿವಾರ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 22,775 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು 275 ದಿನಗಳ ಅಂತರದಲ್ಲಿ ದೇಶದಲ್ಲಿ ದಾಖಲಾದ ಅತೀ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣವಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,48,61,579 ಆಗಿದೆ.
ಇನ್ನು ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೋವಿಡ್ 19 ಪ್ರಮಾಣವು ಹೆಚ್ಚಾಗಿದ್ದು ಶೇಕಡಾ 35.9 ಪ್ರತಿಶತದಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
275 ದಿನಗಳ ಹಿಂದೆ ಅಂದರೆ ಅಕ್ಟೋಬರ್ 3ರಂದು ದೇಶದಲ್ಲಿ ಒಂದೇ ದಿನ 22,842 ಪ್ರಕರಣಗಳು ವರದಿಯಾಗಿದ್ದವು. ಇದಾದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಇಂದು ದೇಶವು 22,700 ಪ್ರಕರಣಗಳನ್ನು ದಾಖಲಿಸಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 406 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್ನಿಂದ ಸಾವನ್ನಪ್ಪಿದ್ದವರ ಸಂಖ್ಯೆ 4,81,486 ಆಗಿದೆ. ಕೇರಳದಲ್ಲಿ ಅತೀ ಹೆಚ್ಚು ಅಂದರೆ 353 ಮಂದಿ ಹಾಗೂ ತಮಿಳುನಾಡಿನಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.