ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಮಹತ್ವದ ಶಿಫಾರಸ್ಸು ಮಾಡಿದೆ. ಆಯುಷ್ಮಾನ್ ಭಾರತ್ – ಪಿಎಂಜೆಎವೈ ಯೋಜನೆ ವ್ಯಾಪ್ತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಸೇರಿಸುವಂತೆ ಸಲಹೆ ನೀಡಲಾಗಿದೆ.
ಕ್ಯಾನ್ಸರ್ ಪೀಡಿತ ಬಡ ಮತ್ತು ಮಧ್ಯಮ ವರ್ಗದವರಿಗೆ ಅದಕ್ಕಾಗಿ ತಗಲುವ ಆರ್ಥಿಕ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲು ಯೋಜನೆಯೊಂದನ್ನು ರೂಪಿಸುವಂತೆ ಸಹ ತನ್ನ ವರದಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿ ಪ್ರಸ್ತಾಪಿಸಿದೆ.
ಬಹುತೇಕ ಕ್ಯಾನ್ಸರ್ ಪೀಡಿತರಿಗೆ ರೇಡಿಯೋಥೆರಪಿ ಅಗತ್ಯವಿದ್ದು, ಹೀಗಾಗಿ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಈ ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರಿಂದಾಗಿ ಕ್ಯಾನ್ಸರ್ ರೋಗಿಗಳು ಕಾಯುವ ಪರಿಸ್ಥಿತಿ ತಪ್ಪಲಿದ್ದು, ಮರಣ ಪ್ರಮಾಣವೂ ಸಹ ಕಡಿಮೆಯಾಗಲಿದೆ ಎಂದು ಶಿಫಾರಸ್ಸಿನಲ್ಲಿ ಹೇಳಲಾಗಿದೆ.