ಮೈಸೂರು: ಪುರಾತನ ಹಿಂದೂ ದೇವಾಲಯಗಳ ತೆರವು ಮಾಡಿದ ಕ್ರಮಕ್ಕೆ ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೆ ಕಿಡಿಕಾರಿದ್ದು, ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಹೇಳಿ ಜನರ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದುವರೆಗೂ 14 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು 5 ಕಟ್ಟಡಗಳಿಗೆ ನ್ಯಾಯಾಲಯ ತಡೆ ನೀಡಿದೆ. 2019ರ ನಂತರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ, ಪುಟ್ ಪಾತ್, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತಹ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಧಾಮಿಕ ಕೇಂದ್ರಗಳನ್ನು ಜನರ ಅಭಿಪ್ರಾಯ ಪಡೆದು ಬೇರೆಡೆಗೆ ಸ್ಥಳಾಂತರಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ ಕೋರ್ಟ್ ಆದೇಶ ಎಂಬ ನೆಪದಲ್ಲಿ ಪುರಾತನ ದೇವಾಲಯಗಳನ್ನೇ ತೆರವುಗೊಳಿಸುತ್ತಿರುವುದು ಎಷ್ಟು ಸರಿ? ಮೈಸೂರು ಅಗ್ರಹಾರ 101 ಗಣಪತಿ ದೇಗುಲ ಪ್ರಮುಖ ಧಾರ್ಮಿಕ ಸ್ಥಳವಾಗಿದ್ದು 1955ರಿಂದಲೂ ಈ ದೇವಸ್ಥಾನವಿದೆ. ಹಲವು ದೇವಾಲಯಗಳು ಪುರಾತನ ಕಾಲದಿಂದಲೂ ಇದ್ದು ಜನರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಇಂತಹ ದೇವಾಲಯಗಳನ್ನು ಏಕಾಏಕಿ ತೆರವಿಗೆ ಮುಂದಾಗಿರುವುದು ಖಂಡನೀಯ ಎಂದು ಗುಡುಗಿದ್ದಾರೆ.
ದೇವಾಲಯಗಳ ತೆರವಿಗೆ ಪಟ್ಟಿ ಮಾಡುವಾಗ ಜನರ ಅಭಿಪ್ರಾಯ ಕೇಳಲಾಗಿದೆಯೇ? ಸಾರ್ವಜನಿಕ ಸ್ಥಳಗಳಲ್ಲಿ 2019ರಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶವನ್ನೇ ನೀಡಿಲ್ಲವೇ? ಹಾಗಾದರೆ ಕ್ಯಾತಮಾರನಹಳ್ಳಿಯಲ್ಲಿ ಅನಧಿಕೃತವಾಗಿ ಮಸೀದಿ ಹೇಗೆ ಬಂತು? ಅದನ್ನು ನಿರ್ಮಿಸುವಾಗ ತಡೆಯಲಿಲ್ಲ ಯಾಕೆ? ಇದು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಲ್ಲವೇ? ಎನ್ .ಆರ್. ಕ್ಷೇತ್ರದಲ್ಲಿ ಅನಧಿಕೃತ ಚರ್ಚ್, ಮಸೀದಿಗಳಿವೆ. 90 ದೇಗುಲಗಳ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶನದಂತೆ ಅಭಿಪ್ರಾಯ ಕೇಳಿಲ್ಲ ಏಕೆ? ಎಂದು ಪ್ರಶ್ನೆಗಳ ಸುಳಿಮಳೆಗೈದಿದ್ದಾರೆ.